ನವದೆಹಲಿ, ಮೇ 17 (DaijiworldNews/PY) : ಕೇಂದ್ರ ಸರ್ಕಾರ ಘೋಷಿಸಿರುವ 20 ಕೋಟಿ ರೂ. ಮೌಲ್ಯದ ಆರ್ಥಿಕ ಪ್ಯಾಕೇಜ್ನ ಕೊನೆಯ ಕಂತಿನ ಮಾಹಿತಿಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಪ್ರಕಟಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮಾತನ್ನು ಉಲ್ಲೇಖಿಸಿದ ನಿರ್ಮಲಾ ಸೀತಾರಾಮನ್ ಅವರು, ಸ್ವಾಭಿಮಾನಿ ಭಾರತ ನಿರ್ಮಾಣವೇ ನಮ್ಮ ಗುರಿ. ಭೂಮಿ, ಕಾರ್ಮಿಕರು, ಹಣಕಾಸು ಲಭ್ಯತೆ ಮತ್ತು ಕಾನೂನನ್ನು ಇದಕ್ಕೆ ಅನುಗುಣವಾಗಿ ಇರಬೇಕು ಎನ್ನುವ ಮಾತನ್ನು ನೆನೆಪಿಸಿಕೊಂಡರು. ಇದಕ್ಕಾಗಿ ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದು, ಅದು ಮುಂದುವರೆಯುತ್ತದೆ ಎಂದು ಹೇಳಿದರು.
8.19 ಕೋಟಿ ರೈತರಿಗೆ ನೇರ ನಗದು ವರ್ಗಾವಣೆ ಮೂಲಕ 16,394 ಕೋಟಿ ರೂ. ಸಹಾಯಧನ ಒದಗಿಸಲಾಗಿದೆ. 10 ಕೋಟಿ ಮಹಿಳೆಯರಿಗೆ 10,025 ರೂ. ಸಿಕ್ಕಿದೆ. ಅಡುಗೆ ಅನಿಲವನ್ನೂ ಬಡವರಿಗೆ ತಕ್ಷಣ ಒದಗಿಸಲಾಯಿತು ಎಂದು ಹೇಳಿದರು.
ವಿಡಿಯೊ ಕಾನ್ಫರೆನ್ಸ್ ಮೂಲಕ ಕಂಪನಿಗಳ ಆಡಳಿತ ಮಂಡಳಿ ಸಭೆಗಳನ್ನು ನಡೆಸಬಹುದು. ರೈಟ್ಸ್ ಇಶ್ಯೂ ಸಹ ವಿಡಿಯೊ ಕಾನ್ಫರೆನ್ಸ್ ಮೂಲಕವೇ ನಿರ್ವಹಿಸಬಹುದು. ಇದು ಆಡಳಿತದಲ್ಲಿ ತಂತ್ರಜ್ಞಾನ ಬಳಕೆಗೆ ಪೂರಕವಾದ ಕ್ರಮವಾಗಿದೆ ಎಂದು ತಿಳಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ದೀಕ್ಷಾ ಮೂಲಕ ಒಂದು ದೇಶ ಒಂದು ಡಿಜಿಟಲ್ ವೇದಿಕೆ ಪ್ರಾರಂಭ ಮಾಡಲಾಗುವುದು. ಪ್ರತ್ಯೇಕ ಚಾನಲ್ಗಳನ್ನು ವಿವಿಧ ತರಗತಿಗಳಿಗೆ ಶುರು ಮಾಡಲಾಗುವುದು. ಶಿಕ್ಷಣ ಕ್ಷೇತ್ರದಲ್ಲಿ ರೇಡಿಯೋ ಹಾಗೂ ಪೊಡ್ಕಾಸ್ಟ್ ಬಳಕೆಯನ್ನೂ ಹೆಚ್ಚು ಮಾಡಲಾಗುವುದು. ವಿಶೇಷ ಕಾರ್ಯಕ್ರಮಗಳನ್ನು ಅಂಗವಿಕಲ ವಿದ್ಯಾರ್ಥಿಗಳಿಗಾಗಿ ರೂಪಿಸಲಾಗುವುದು. ದೇಶದ 100 ಮುಖ್ಯ ವಿಶ್ವವಿದ್ಯಾಲಯಗಳು ಆನ್ಲೈನ್ ತರಗತಿಗಳನ್ನು ಆರಂಭಿಸಲಿವೆ ಎಂದು ಮಾಹಿತಿ ನೀಡಿದರು.
ವಿವಿಧ ರಾಜ್ಯ ಸರ್ಕಾರಗಳು ದೇಶದ 2.2 ಕೋಟಿ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ 3950 ಕೋಟಿ ರೂ. ಸಹಾಯಧನ ಬಿಡುಗಡೆ ಮಾಡಿವೆ. ಆನ್ಲೈನ್ನಲ್ಲಿ ಪಠ್ಯಕ್ರಮವನ್ನು ಪ್ರಕಟಿಸಲಾಗಿದೆ. ಮಕ್ಕಳಿಗೆ ಸ್ವಯಂಪ್ರಭ ಚಾನೆಲ್ ಮೂಲಕ ಪಾಠ ಮಾಡಲು ನೆರವು ನೀಡಲಾಗಿದೆ. ದೊಡ್ಡಮಟ್ಟದಲ್ಲಿ ಆನ್ಲೈನ್ ತರಗತಿಗಳು ಆರಂಭವಾಗಿವೆ ಎಂದರು.
ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಕೆಗೆ ಹೆಚ್ಚು ಒತ್ತು ನೀಡಲಾಗಿದೆ. ಶಾಲೆಗಳು ಬಳಸುವ ಡೈರೆಕ್ಟ್ ಟೆಲಿಕಾಸ್ಟ್ ಮೋಡ್ನಲ್ಲಿ 12 ಹೆಚ್ಚುವರಿ ಚಾನೆಲ್ಗಳು ಲಭ್ಯವಿವೆ. ಇದು ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣದ ನಿರಂತರತೆ ಕಾಯ್ದುಕೊಳ್ಳಲು ಸಹಕಾರಿ. ಪಾಠಗಳನ್ನು ನೇರ ಪ್ರಸಾರ ಮಾಡುವುದು ಸುಲಭವಾಗಿದೆ. ಟಾಟಾ ಸ್ಕೈ ಡಿಟಿಎಚ್ನಂಥ ಕೆಲ ಖಾಸಗಿ ಸಂಸ್ಥೆಗಳೊಂದಿಗೂ ನಾವು ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.
ದೇಶದಲ್ಲಿ ಕೋವಿಡ್–19 ಹರಡುವುದನ್ನು ತಡೆಯಲೆಂದು ಸಾಕಷ್ಟು ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿತು. ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಅತ್ಯಗತ್ಯ ವಸ್ತುಗಳ ಖರೀದಿಗಾಗಿ ರಾಜ್ಯಗಳಿಗೆ 15,000 ಕೋಟಿ ರೂ. ಒದಗಿಸಲಾಯಿತು. ಪ್ರಯೋಗಾಲಯಗಳು, ಕಿಟ್ಗಳು ಮತ್ತು ಟೆಲಿ ಕಮ್ಯುನಿಕೇಶನ್ ಸೇವೆಗಳನ್ನು ಸುಧಾರಿಸಲು ಒತ್ತು ನೀಡಲಾಯಿತು. ಆರೋಗ್ಯ ಸೇತು ಆ್ಯಪ್ ಇಂದು ನೆರವಾಗುತ್ತಿದೆ. ವೈದ್ಯಕೀಯ ಸೇವೆ ಒದಗಿಸುವವರ ರಕ್ಷಣೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ದೇಶದಲ್ಲಿ ಪಿಪಿಇ ಕಿಟ್ಗಳೂ ಸಾಕಷ್ಟು ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿವೆ, ಲಭ್ಯವಿದೆ.
ಸರ್ಕಾರವು ಸಾರ್ವಜನಿಕ ಆರೋಗ್ಯಕ್ಕಾಗಿ ಮಾಡುತ್ತಿದ್ದ ವೆಚ್ಚವನ್ನು ಹೆಚ್ಚಿಸಲಾಗಿದೆ. ಸಾಂಕ್ರಾಮಿಕ ರೋಗಗಳ ಚಿಕಿತ್ಸಾ ಘಟಕವನ್ನು ಜಿಲ್ಲೆಗಳಲ್ಲಿಯೂ ಆರಂಭಿಸಲಾಗುವುದು. ಪ್ರಯೋಗಾಲಯಗಳನ್ನು ಎಲ್ಲ ವಲಯಗಳ ಮಟ್ಟದಲ್ಲಿ ಸ್ಥಾಪಿಸಲಾಗುವುದು. ಹೆಚ್ಚುವರಿಯಾಗಿ ಉದ್ಯೋಗ ಖಾತ್ರಿ ಯೋಜನೆಗೆ 40 ಸಾವಿರ ಕೋಟಿ ರೂ. ನೀಡಲು ಸರ್ಕಾರ ಅನುಮತಿ ನೀಡಿದೆ. ಉದ್ಯೋಗ ಖಾತ್ರಿ ಯೋಜನೆಗೆ ಬಜೆಟ್ನಲ್ಲಿ 61,000 ಕೋಟಿ ರೂ. ಮೀಸಲಿಡಲಾಗಿತ್ತು. ಇದರ ಜೊತೆಗೆ ಹೆಚ್ಚುವರಿಯಾಗಿ 40 ಸಾವಿರ ಕೋಟಿ ರೂ. ಒದಗಿಸಲಾಗುವುದು ಎಂದರು.
ಸರ್ಕಾರವು ಕೊರೊನಾ ಕಾರಣದಿಂದ ಸಾಲ ಮರುಪಾವತಿ ಮಾಡಲು ವಿಫಲವಾದ ಕಂಪೆನಿಗಳಿಗೆ ನೆರವಾಗಲಿದೆ. ಸಾಲ ಮರುಪಾವತಿ ಮಾಡಲು ಸಾಧ್ಯವಾಗದ ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳ ವಿರುದ್ದ ಈ ವರ್ಷ ದಿವಾಳಿ ಪ್ರಕ್ರಿಯೆ ನಡೆಸಲು ಹೊಸ ನಿಬಂಧನೆಗಳು ಅನುಷ್ಠಾನಕ್ಕೆ ಬರಲಿವೆ ಎಂದು ತಿಳಿಸಿದರು.