ಮುಂಬೈ, ಮೇ 17 (Daijiworld News/MB) : ದೇಶದಲ್ಲೇ ಅಧಿಕ ಕೊರೊನಾ ಪ್ರಕರಣಗಳು ದಾಖಲಾಗಿರುವ ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿರುವ ಹಿನ್ನಲೆಯಲ್ಲಿ ಮೇ 31ರವರೆಗೆ ಲಾಕ್ಡೌನ್ ವಿಸ್ತರಣೆ ಮಾಡಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭಾನುವಾರ ಆದೇಶ ಹೊರಡಿಸಿದ್ದಾರೆ.
ಲಾಕ್ಡೌನ್ ಅವಧಿ ಇಂದು ಸಂಜೆಗೆ ಅಂತ್ಯವಾಗುವ ಕಾರಣದಿಂದಾಗಿ ಈ ಆದೇಶ ಹೊರಡಿಸಿರುವ ಮಹಾರಾಷ್ಟ್ರ ಸಿಎಂ, ಲಾಕ್ಡೌನ್ 31ರವರೆಗೆ ವಿಸ್ತರಣೆ ಮಾಡಲಾಗುವುದು. ತೆರವಿನ ಕುರಿತಾಗಿ ಶೀಘ್ರದಲ್ಲಿಯೇ ತಿಳಿಸಲಾಗುವುದು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 30 ಸಾವಿರದ ಗಡಿ ದಾಟಿದ್ದು ಮೇ ಅಂತ್ಯದ ವೇಳೆಗೆ ಮಹಾರಾಷ್ಟ್ರ ಒಂದರಲ್ಲೇ ಕೊರೊನಾ ಸೋಂಕಿತರ ಸಂಖ್ಯೆ 50 ಸಾವಿರ ತಲುಪುವ ನಿರೀಕ್ಷೆ ಇದೆ ಎಂದು ಆರೋಗ್ಯಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ಒಂದು ದಿನದಲ್ಲಿ ಮಹಾರಾಷ್ಟ್ರದಲ್ಲಿ ಒಟ್ಟು 1, 606 ಪ್ರಕರಣಗಳು ದೃಢಪಟ್ಟಿದ್ದು ಈ ಪೈಕಿ ಮುಂಬೈಯಲ್ಲಿಯೇ 884 ಪ್ರಕರಣಗಳು ದಾಖಲಾಗಿದೆ. ಮಹಾರಾಷ್ಟ್ರದ ಒಟ್ಟು 30706 ಕೊರೊನಾ ಪ್ರಕರಣಗಳ ಪೈಕಿ ಮುಂಬೈನಲ್ಲಿಯೇ 18,555 ಜನರಿಗೆ ಕೊರೊನಾ ಪಾಸಿಟಿವ್ ಆಗಿದೆ.