ಬೆಂಗಳೂರು, ಮೇ 17 (DaijiworldNews/PY) : ಕೊರೊನಾ ಸೋಂಕಿನಿಂದ ಲಾಕ್ಡೌನ್ ಜಾರಿಯಾಗಿರುವ ಕಾರಣ ವಿವಿಧ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಐತಿಹಾಸಿಕ ಏರ್ ಲಿಫ್ಟ್ ಮೂಲಕ ಭಾರತಕ್ಕೆ ಕರೆದುಕೊಂಡು ಬರಲಾಗುತ್ತಿದೆ. ಮೇ 13ಕ್ಕೆ ಮೊದಲ ಹಂತದ ವಂದೇ ಭಾರತ್ ಮಿಷನ್ ಯೋಜನೆ ಅಂತ್ಯವಾಗಿದ್ದು, ಎರಡನೇ ಹಂತದ ಏರ್ ಲಿಫ್ಟ್ ಇಂದಿನಿಂದ ಆರಂಭವಾಗಲಿದೆ.
ಎರಡನೇ ಹಂತದಲ್ಲಿ ವಂದೇ ಭಾರತ್ ಮಿಷನ್ ಏರ್ ಲಿಫ್ಟ್ ಇಂದಿನಿಂದ ಮೇ 22ರ ವರೆಗೆ ನಡೆಯಲಿದ್ದು, ಈ ಹಂತದಲ್ಲಿ 31 ದೇಶಗಳಿಂದ ಭಾರತೀಯರನ್ನು ಕರೆದುಕೊಂಡು ಬರಲಾಗುತ್ತಿದೆ. ದೇಶದ 15 ನಗರಗಳಿಗೆ 149 ವಿಮಾನಗಳು ಆಗಮಿಸಲಿದೆ.
ಈ ಬಾರಿಯೂ ಮೊದಲ ಹಂತದಲ್ಲಿ ವೃದ್ದರು, ಆರೋಗ್ಯ ಸಮಸ್ಯೆ ಇರುವವರು, ಗರ್ಭಿಣಿಯರು, ಕೆಲಸ ಕಳೆದುಕೊಂಡವರಿಗೆ ಆದ್ಯತೆ ನೀಡಲಾಗಿದ್ದು, ಕ್ವಾರಂಟೈನ್ಗೆ ಕಡ್ಡಾಯವಾಗಿ ಒಳಪಡಬೇಕಾಗಿದೆ.
ಈ ಪೈಕಿ ಕರ್ನಾಟಕಕ್ಕೆ ಒಟ್ಟು 14 ದೇಶಗಳಿಂದ 17 ವಿಮಾನಗಳು ಬರಲಿದೆ. ಒಂದು ವಿಮಾನ ಸೋಮವಾರ ಮಂಗಳೂರಿಗೆ ಬರಲಿದೆ. ಅಮೆರಿಕಾದಿಂದ 3, ಕೆನಡಾದಿಂದ 2, ಸೌದಿ ಅರೆಬಿಯಾ, ಫಿಲಿಪೈನ್ಸ್, ಯುಎಇ, ಇಂಡೋನೇಷ್ಯಾ, ಐರ್ಲೆಂಡ್, ಜಪಾನ್, ಆಸ್ಟ್ರೇಲಿಯಾ, ಫ್ರಾನ್ಸ್, ಮಲೇಷಿಯಾ, ಜರ್ಮನಿ, ಒಮನ್, ಕತಾರ್ನಿಂದ ತಲಾ ಒಂದೊಂದು ವಿಮಾನಗಳ ವ್ಯವಸ್ಥೆ ಮಾಡಲಾಗಿದೆ.