ಗಾಂಧಿನಗರ, ಮೇ 17 (DaijiworldNews/PY) : ವಿವಾಹವಾಗಿ ಗಂಡನ ಮನೆಯಲ್ಲಿರಬೇಕಾದ ಮಗಳು ತವರು ಮನೆಗೆ ವಾಪಾಸ್ಸಾದ ಕಾರಣ ಮನನೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಡೋದರದ ಲಖಿಂಪುರದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆಯನ್ನು ಅನಿತಾ ದೇವಸಿ(45) ಎಂದು ಗುರುತಿಸಲಾಗಿದೆ. ಈಕೆ ಬುಧವಾರ ಮಧ್ಯಾಹ್ನ ಮನೆಯ 5ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಮಧ್ಯಾಹ್ನನದ ಸಮಯದಲ್ಲಿ ಎಲ್ಲರೂ ಮಲಗಿದ್ದನ್ನು ನೋಡಿಕೊಂಡು ಮಹಿಳೆ ನೇರವಾಗಿ ಟೆರೇಸ್ಗೆ ತೆರಳಿ ಅಲ್ಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಾಜಸ್ಥಾನದ ಪಲಿ ಜಿಲ್ಲೆಯ ವ್ಯಕ್ತಿಯೊಬ್ಬನಿಗೆ ದೇವಸಿಯ ಮಗಳನ್ನು ಮದುವೆ ಮಾಡಿಕೊಡಲಾಗಿತ್ತು. ಆದರೆ ಆಕೆಯ ಮಗಳು ಮಾತ್ರ ತವರು ಮನೆಗೆ ಬಂದವಳು ಪುನಃ ಗಂಡನ ಮನೆಗೆ ಹೋಗುವ ಮನಸ್ಸು ಮಾಡಲಿಲ್ಲ. ಈ ಕಾರಣದಿಂದ ದೇವಸಿ ಹಾಗೂ ಆಕೆಯ ಪತಿ ಮಗಳನ್ನು ಆಕೆಯ ಗಂಡನ ಮನೆಗೆ ಹೋಗುವಂತೆ ಬೇಡಿಕೊಂಡಿದ್ದಾರೆ. ಆದರೆ ದೇವಸಿಯ ಮಗಳು ಮಾತ್ರ ಯಾವುದೇ ಕಾರಣಕ್ಕೂ ತನ್ನ ಗಂಡನ ಮನೆಗೆ ಹೋಗಲು ತಯಾರಿರಲಿಲ್ಲ.
ಇನ್ನೊಂದು ಕಡೆ ಅಳಿಯನ ಮನೆ ಕಡೆಯಿಂದಲೂ ನಿಮ್ಮ ಮಗಳನ್ನು ಕಳುಹಿಸಿಕೊಡಿ ಎಂದು ಒತ್ತಡ ಹಾಕಲು ಶುರು ಮಾಡಿದ್ದರು. ಆದರೆ, ದೇವಸಿ ಮಾತ್ರ ಮಗಳನ್ನು ಆಕೆಯ ಗಂಡನ ಮನೆಗೆ ಕಳುಹಿಸಿಕೊಡುವಲ್ಲಿ ವಿಫಲವಾಗಿದ್ದರು.
ಅಳಿಯನ ಮನೆಯಿಂದ ಮಗಳನ್ನು ಕಳುಹಿಸಿಕೊಡಿ ಎಂದು ಪದೇ ಪದೇ ಒತ್ತಡ ಹೇರಲಾಗುತ್ತಿತ್ತು. ಹಾಗೆಯೇ ಬುಧವಾರ ಕರೆ ಮಾಡಿದ್ದ ಅಳಿಯ, ನಿಮ್ಮ ಮಗಳನ್ನು ನಮ್ಮ ಮನೆಗೆ ಕಳುಹಿಸಿಕೊಂಡಿ ಎಂದು ಪೀಡಿಸಲು ಶುರು ಮಾಡಿದ್ದಾನೆ. ದಂಪತಿಗಳು ಅಳಿಯನ ಮಾತಿನಿಂದ ಕಂಗಾಲಾಗಿದ್ದು, ದೇವಸಿ ಪತಿ ಅನಾರೋಗ್ಯಕ್ಕೆ ತುತ್ತಾದರು.
ಈ ಕಡೆ ಮಧ್ಯಾಹ್ನದ ಸಂದರ್ಭ ಎಲ್ಲರೂ ನಿದ್ರೆ ಮಾಡುತ್ತಿರುವ ಸಂದರ್ಭವನ್ನು ನೋಡಿ ದೇವಸಿ ನೇರವಾಗಿ ಮನೆಯ ಟೇರೆಸ್ಗೆ ತೆರಳಿ ಅಲ್ಲಿಂದ ಹಾರಿದ್ದಾರೆ. ಪರಿಣಾಮ ತಲೆಗೆ ಗಂಭೀರವಾದ ಏಟು ಬಿದ್ದಿದ್ದು, ತಕ್ಷಣವೇ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಆಕೆ ಸಾವನ್ನಪ್ಪಿದ್ದಾಳೆ. ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.