ಕೋಲಾರ, ಮೇ 17 (Daijiworld News/MB) : ಕೋಲಾರದ ಕೆಜಿಎಫ್ ಮಾರಿಕುಪ್ಪಂನಲ್ಲಿರುವ ಗಣಿಗೆ ಇಳಿದು ಕಳ್ಳತನಕ್ಕೆ ಯತ್ನಿಸಿದ್ದ ಐವರ ಪೈಕಿ ಗಣಿಯಲ್ಲೇ ಸಿಲುಕಿ ಮೂವರು ಮೃತಪಟ್ಟಿದ್ದು ಉಳಿದಿಬ್ಬರಲ್ಲಿ ಒರ್ವನಲ್ಲಿ ಸೋಂಕು ಪತ್ತೆಯಾಗಿದ್ದು ಈತನ ಟ್ರಾವೆಲ್ ಹಿಸ್ಟರಿ ನೋಡಿ ಪೊಲೀಸರೇ ದಂಗಾಗಿದ್ದಾರೆ.
ರೋಗಿ ಸಂಖ್ಯೆ 1128 ವ್ಯಕ್ತಿಯು ಕೆಜಿಎಫ್ ನಗರದಲ್ಲೇ ಆಟೋ ಚಾಲಕನಾಗಿದ್ದು ಕಳ್ಳತನಕ್ಕೆ ಯತ್ನ ಮಾಡಿದ ಇವನ ಸಂಪರ್ಕಕ್ಕೆ ಬಂದ 9 ಮಂದಿ ಪೊಲೀಸರನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿದೆ.
ಸೆರೆ ಸಿಕ್ಕ ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರು ಮಾಡಲಾಗಿತ್ತು. ಈ ಪೈಕಿ ಓರ್ವನ ಕೊರೊನಾ ಪರೀಕ್ಷೆಗೆ ನ್ಯಾಯಾಲಯ ಆದೇಶ ನೀಡಿದ ಹಿನ್ನಲೆಯಲ್ಲಿ ಕೊರೊನಾ ಪರೀಕ್ಷೆ ನಡೆಸಲಾಗಿದ್ದು ಸೋಂಕು ಇರುವುದು ದೃಢಪಟ್ಟಿದೆ. ಆದರೆ ಈ ಮೊದಲೇ ಆತನಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನಲೆಯಲ್ಲಿ ಆತನನ್ನು ಪೊಲೀಸರು ಪ್ರತ್ಯೇಕವಾಗಿ ಇರಿಸಿ ಮತ್ತಷ್ಟು ಜನರಿಗೆ ಸೋಂಕು ಹರಡುವ ಭೀತಿಯನ್ನು ತಪ್ಪಿಸಿದ್ದಾರೆ.
ಮೇ 14ರಂದು ಕೋಲಾರ ಜಿಲ್ಲೆಯ ಕೆಜಿಎಫ್ನ ಮಾರಿಕುಪ್ಪಂನಲ್ಲಿರುವ ಚಿನ್ನದ ಗಣಿಯಲ್ಲಿ ಐದು ಜನ ಕಳ್ಳರು ಕಳ್ಳತನಕ್ಕೆ ಯತ್ನಿಸಿದ್ದರು. ಈ ಸಂದರ್ಭದಲ್ಲಿ ಮೂವರು ಗಣಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದು ಓರ್ವನ ಮೃತದೇಹದ ಶೋಧ ಕಾರ್ಯಚರಣೆ ಈಗಲೂ ನಡೆಯುತ್ತಿದೆ.