ಗಾಂಧಿನಗರ, ಮೇ 17 (DaijiworldNews/PY) : ಲಾಕ್ಡೌನ್ ನಾಲ್ಕನೇ ಹಂತದಲ್ಲಿ ಹೆಚ್ಚಿನ ಸಡಿಲಿಕೆಯಾಗುವ ಸುಳಿವು ಸಿಗುತ್ತಿದ್ದಂತೆ ಪ್ರದೇಶ ಕಾಂಗ್ರೆಸ್ ಸಮಿತಿ ಪಕ್ಷ ಸಂಘಟನೆ ಹಾಗೂ ಬಲವರ್ಧನೆಗೆ ತಯಾರಿ ನಡೆಸಿದೆ.
ಮೇ 19 ಮಂಗಳವಾರದಿಂದ ಮೇ 23 ಶನಿವಾರದವರೆಗೆ ಪಕ್ಷದ ವಿವಿಧ ಘಟಕಗಳ ಸಭೆಯನ್ನು ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ನಿಯೋಜಿತ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಯೋಜಿಸಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ತಿಳಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾಗಿ ಇದೇ 31ರಂದು ಅಧಿಕಾರ ಸ್ವೀಕರಿಸುವ ಸಾಧ್ಯತೆಯಿದೆ. ಎಲ್ಲ ಹಿರಿಯ–ಕಿರಿಯ ಮುಖಂಡರನ್ನು ಇದಕ್ಕೆ ಪೂರ್ವಭಾವಿಯಾಗಿ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಪುನರ್ ಸಂಘಟಿಸುವ ಸಲುವಾಗಿ ಅಭಿಪಗರಾಯ ಪಡೆದುಕೊಂಡು ಮುಂದಿನ ಹೆಜ್ಜೆ ಇಡಲು ಡಿಕೆಶಿ ಅವರ ತೀರ್ಮಾನಿಸಿದ್ದಾರೆ.
ಮೊದಲ ದಿನದಂದು ಬೆಳಗ್ಗೆ 11 ಗಂಟೆಗೆ ವಿಧಾನಸಭಾ ಕ್ಷೇತ್ರಗಳ ವೀಕ್ಷಕರ ಹಾಗೂ ಮಧ್ಯಾಹ್ನ 3 ಗಂಟೆಗೆ ಕೆಪಿಸಿಸಿ ವತಿಯಿಂದ ನೇಮಕಗೊಂಡ ವಿಧಾನಸಭಾ ಕ್ಷೇತ್ರಗಳ ಸಂಯೋಜಕರ ಸಭೆ ನಡೆಯಲಿದೆ.
ಮೇ 20ರಂದು ಬೆಳಿಗ್ಗೆ 2018ರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ಪಕ್ಷದ ಅಭ್ಯರ್ಥಿಗಳ ಹಾಗೂ ಮಧ್ಯಾಹ್ನ ರಾಜ್ಯದ ಎಲ್ಲಾ ಜಿಲ್ಲಾ ಘಟಕಗಳ ಅಧ್ಯಕ್ಷರು, ಮಾಜಿ ಸಂಸದರು, 2019ರ ಲೋಕಸಭೆ ಚುನಾವಣೆಯಲ್ಲಿ ಪಕ್ಷದಿಂದ ಕಣಕ್ಕಿಳಿದ ಅಭ್ಯರ್ಥಿಗಳ ಸಭೆ ನಡೆಯಲಿದೆ.
ಮೇ 21ರಂದು ಬೆಳಿಗ್ಗೆ ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಘಟಕಗಳ ಅಧ್ಯಕ್ಷರು ಹಾಗೂ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ಮಧ್ಯಾಹ್ನ 3 ಗಂಟೆಗೆ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಜಿಲ್ಲಾ ಘಟಕಗಳ ಅಧ್ಯಕ್ಷರ ಸಭೆ ಬಳಿಕ ಸಂಜೆ 5 ಗಂಟೆಗೆ ಎನ್ಎಸ್ಯುಐ ಪದಾಧಿಕಾರಿಗಳ ಸಭೆ ನಡೆಯಲಿದೆ
ಮೇ 22ರಂದು 2018ಕ್ಕಿಂತ ಹಿಂದಿನ ಮಾಜಿ ಶಾಸಕರು, ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಪರಾಜಿತಗೊಂಡ ಅಭ್ಯರ್ಥಿಗಳು, ಮಧ್ಯಾಹ್ನ 3 ಗಂಟೆಗೆ ವಿವಿಧ ನಿಗಮ, ಮಂಡಳಿಗಳ ಅಧ್ಯಕ್ಷರು, ಮಾಜಿ, ಅಧ್ಯಕ್ಷರು, ಸದಸ್ಯರು, ಕಾಡಾ ಹಾಗೂ ನಗರಾಭಿವೃದ್ಧಿ ಮಂಡಳಿಗಳ ಮಾಜಿ ಅಧ್ಯಕ್ಷರ ಸಭೆ ನಡೆಯಲಿದ್ದು, ನಂತರ ಎಲ್ಲಾ ಸೆಲ್ಗಳ, ಇಂಟೆಕ್ ರಾಜ್ಯ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಳು ಸಭೆ ಸೇರಲಿದ್ದಾರೆ.
ಮೇ 23ರಂದು ಬೆಳಿಗ್ಗೆ 11 ಗಂಟೆಗೆ ಕೆಪಿಸಿಸಿ ಸದಸ್ಯರ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಇತರ ಸಭೆಗಳಲ್ಲಿ ಪಾಲ್ಗೊಳ್ಳದಿದ್ದವರು ಭಾಗವಹಿಸಲಿದ್ದಾರೆ ಎಂದು ಸಲೀಂ ಅಹಮದ್ ಹೇಳಿದ್ದಾರೆ.