ಬೆಂಗಳೂರು, ಮೇ 17 (Daijiworld News/MB) : ಕೇಂದ್ರ ತನ್ನ ಆತ್ಮ ನಿರ್ಭರ್ ಭಾರತ್ ಪ್ಯಾಕೇಜ್ನ 5 ನೇ ದಿನದ ಘೋಷಣೆಯಲ್ಲಿ ರಾಜ್ಯಗಳ ಆರ್ಥಿಕ ಸುಧಾರಣೆಗೆ ಒತ್ತು ನೀಡಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕಾರ್ಮಿಕರಿಗೆ ಉದ್ಯೋಗ ಸೃಷ್ಟಿ, ಶಿಕ್ಷಣ ಕ್ಷೇತ್ರದ ಸುಧಾರಣೆಗಳು, ಕೈಗಾರಿಕಾ ವಲಯದ ಕಾನೂನು ಸುಧಾರಣೆ ಹಾಗೂ ರಾಜ್ಯಗಳ ಆರ್ಥಿಕ ಸುಧಾರಣೆಗೆ ಕೇಂದ್ರವು ಒತ್ತು ನೀಡಿದೆ. ಕೇಂದ್ರದ ಆತ್ಮ ನಿರ್ಭರ್ ಭಾರತ ಆಶಯದ ಸಾಕಾರಕ್ಕೆ ರಾಜ್ಯ ಸರ್ಕಾರ ಎಲ್ಲಾ ರೀತಿಯಲ್ಲಿ ಶ್ರಮಿಸಲಿದೆ ಎಂದು ಭರವಸೆ ನೀಡಿದ್ದಾರೆ.
ಕೊರೊನಾದಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ಔದ್ಯೋಗಿಕ ಘಟಕಗಳು ಮತ್ತು ವ್ಯಕ್ತಿಗಳ ವಿರುದ್ಧ ಆರ್ಥಿಕ ದಿವಾಳಿತನದ ಕಾನೂನಿಗೆ ಒಳಪಡಿಸಲಾಗುವುದಿಲ್ಲ ಎಂಬ ತೀರ್ಮಾನದಿಂದಾಗಿ ಬಿಕ್ಕಟ್ಟಿನಲ್ಲಿರುವ ಎಂ.ಎಸ್.ಎಂ.ಇ. ಮಾಲೀಕರಿಗೆ ನೆಮ್ಮದಿ ನೀಡಿ, ಮಗದೊಮ್ಮೆ ಆರ್ಥಿಕ ಪುನಃಶ್ಚೇತನಕ್ಕೆ ಅವಕಾಶ ನೀಡಿದಂತಾಗಿದೆ. ಎಲ್ಲ ವಲಯಗಳಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಮುಕ್ತ ಘೋಷಣೆ ನಷ್ಟದಲ್ಲಿರುವ ಸರ್ಕಾರಿ ವಲಯದ ಸಂಸ್ಥೆಗಳಿಗೆ ಸಹಾಯವಾಗಲಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು ಪ್ರಧಾನ ಮಂತ್ರಿ ಇ-ವಿದ್ಯಾ ಯೋಜನೆಯು ಈವರೆಗೆ ನಾವು ಅವಳಡಿಸಿರುವ ಔಪಚಾರಿಕ ಪದ್ಧತಿಯ ವಿದ್ಯಾರ್ಜನೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಇ-ಎಜುಕೇಷನ್ ಯೋಜನೆ ದೇಶದ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವವಾದ ಬದಲಾವಣೆಗೆ ಕಾರಣವಾಗಲಿದೆ. ಟಿ.ವಿ. ವಾಹಿನಿಗಳ ಮೂಲಕ ಮಕ್ಕಳಿಗೆ ಪಾಠ ಕಲಿಸಲು ಮುಂದಾಗಿರುವುದು ಉತ್ತಮ ನಿರ್ಧಾರವಾಗಿದ್ದು ಇದರಿಂದಾಗಿ ಶಾಲಾ ದಿನಗಳನ್ನು ಕಳೆದುಕೊಂಡ ಮಕ್ಕಳಿಗೆ ಪ್ರಯೋಜನವಾಗಲಿದೆ ಎಂದು ಹೇಳಿದ್ದಾರೆ.