ಬೆಂಗಳೂರು, ಮೇ 17 (DaijiworldNews/SM): ಕೊರೊನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಹೋರಾಟ ನಿರಂತರವಾಗಿ ಸಾಗಿದೆ. ಈ ನಡುವೆ ನಾಲ್ಕನೇ ಅವಧಿಯ ಲಾಕ್ ಡೌನ್ ಗೆ ಘೋಷಣೆಯಾಗಿದೆ. ಈಗಾಗಲೇ ಕೇಂದ್ರ ಸರಕಾರ ತನ್ನ ಮಾರ್ಗಸೂಚಿ ಹೊರಡಿಸಿದೆ. ಆದರೆ, ರಾಜ್ಯದಲ್ಲಿ ಯಾವ ರೀತಿ ಹೊಸ ಮಾರ್ಗಸೂಚಿ ಜಾರಿಗೆ ತರಬೇಕೆಂಬ ನಿರ್ಧಾರವನ್ನು ಸೋಮವಾರ ನಿರ್ಧಾರಗೊಳ್ಳಲಿದೆ.
ಸೋಮವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಬಗ್ಗೆ ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚೆ ನಡೆಸಲಿದ್ದಾರೆ. ಬಳಿಕ ರಾಜ್ಯದಲ್ಲಿ ಯಾವ ಪ್ರದೇಶಗಳಲ್ಲಿ ಯಾವ ನಿಯಮಗಳು ಸಡಿಲಿಕೆಗೊಳ್ಳಲಿವೆ ಎಂಬುವುದು ತಿಳಿದುಬರಲಿದೆ. ಇನ್ನು ಈಗಾಗಲೇ ರಾಜ್ಯದಲ್ಲಿ ಮೇ 19ರ ತನಕ ಲಾಕ್ ಡೌನ್ ಮುಂದುವರೆಯಲಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಬಿಡುಗಡೆಗೂ ಮುನ್ನವೇ ರಾಜ್ಯದಲ್ಲಿ ಎರಡು ದಿನಗಳ ಕಾಲ ಲಾಕ್ ಡೌನ್ ವಿಸ್ತರಣೆಗೊಳಿಸಲಾಗಿತ್ತು. ಮೇ 19ರವರೆಗೂ ಈಗಿರುವ ನಿಯಮಗಳನ್ನೇ ಪಾಲಿಸುವಂತೆ ರಾಜ್ಯ ಸರಕಾರ ಆದೇಶ ನೀಡಿದೆ.
ಇನ್ನು ಕೇಂದ್ರದ ಮಾರ್ಗಸೂಚಿಗಳನ್ನು ರಾಜ್ಯದಲ್ಲಿ ಜಾರಿಗೆ ತರುವ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರವೇ ರಾಜ್ಯ ಸರ್ಕಾರವೂ ಕೂಡಾ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಿದೆ. ಕೇಂದ್ರದ ಮಾರ್ಗಸೂಚಿಯ ಪ್ರಕಾರ ಕೆಲವು ನಿಯಗಳನ್ನು ಜಾರಿಗೆ ತರುವ ವಿಚಾರಗಳು ರಾಜ್ಯಗಳಿಗೆ ಬಿಟ್ಟಿದ್ದು ಎಂಬುವುದನ್ನು ಕೇಂದ್ರ ಉಲ್ಲೇಖ ಮಾಡಿದೆ. ಪ್ರಮುಖವಾಗಿ ಅಂತರ್ ರಾಜ್ಯ, ಹಾಗೂ ಜಿಲ್ಲೆಗಳ ನಡುವೆ ಬಸ್ ಸಂಚಾರ ವಿಚಾರದ ಕುರಿತ ನಿರ್ಧಾರ ಕೈಗೊಳ್ಳಲು ರಾಜ್ಯ ಸರಕಾರಗಳ ಹೆಗಲಿಗೆ ನೀಡಿದೆ. ಈ ಹಿನ್ನೆಲೆ ಸೋಮವಾರದಂದು ಮುಖ್ಯಮಂತ್ರಿಗಳು ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಿದೆ.