ಬೆಂಗಳೂರು, ಮೇ 17 (DaijiworldNews/SM): ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ಕುವೈಟ್ ನಲ್ಲೂ ಅಟ್ಟಹಾಸ ಮೆರೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ 600ಕ್ಕೂ ಹೆಚ್ಚು ಕನ್ನಡಿಗರು ಭಾರತೀಯ ರಾಯಭಾರ ಕಚೇರಿಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಶೀಘ್ರದಲ್ಲೇ ಅವರನ್ನು ತವರೂರಿಗೆ ಕರೆ ತರುವ ಕಾರ್ಯ ನಡೆಯಲಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಭರವಸೆ ನೀಡಿದ್ದಾರೆ.
“ತುಳು ಕೂಟ ಕುವೈಟ್”ನ ಅಧ್ಯಕ್ಷ ರಮೇಶ್ ಎಸ್. ಭಂಡಾರಿ ಸೇರಿದಂತೆ ಇತರೆ ಪ್ರಮುಖರೊಂದಿಗೆ ವಿಡಿಯೋ ಸಂವಾದದಲ್ಲಿ ಸಚಿವ ಡಿ.ವಿ. ಸದಾನಂದ ಗೌಡ ಭಾಗವಹಿಸಿ ಮಾಹಿತಿ ಸಂಗ್ರಹಿಸಿದರು. ಈಗಾಗಲೇ ನಾನಾ ದೇಶಗಳಿಂದ ಹಲವು ವಿಮಾನ ಹಾರಾಟ ವ್ಯವಸ್ಥೆ ಕಲ್ಪಿಸಿ ಹಿರಿಯ ನಾಗರಿಕರು, ತುರ್ತು ವೈದ್ಯಕೀಯ ಚಿಕಿತ್ಸೆ ಬೇಕಾಗಿರುವವರು, ಗರ್ಭಿಣಿಯರ ಪಟ್ಟಿಯನ್ನು ಆದ್ಯತೆ ಮೇರೆಗೆ ಸಿದ್ಧಪಡಿಸಲಾಗಿದೆ. ಅದೇ ರೀತಿ ಕುವೈಟ್ನಿಂದ 10 ದಿನದೊಳಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಇಲ್ಲವೇ ಮಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಒಂದು ವಿಮಾನ ಹಾರಾಟ ವ್ಯವಸ್ಥೆ ಕಲ್ಪಿಸುವುದಾಗಿ ಕೇಂದ್ರ ಸಚಿವ ಡಿ.ವಿಸದಾನಂದಗೌಡ ಭರವಸೆ ನೀಡಿದರು.
ಇನ್ನು ಈಗಾಗಲೇ ಕುವೈಟ್ನಿಂದ ಮೂರು ವಿಮಾನಗಳು ಭಾರತಕ್ಕೆ ಬಂದಿವೆ. ಆ ಮೂಲಕ ಅನಿವಾಸಿ ಭಾರತೀಯರನ್ನು ಕರೆ ತರುವ ಕಾರ್ಯ ಮಾಡಲಾಗಿದೆ. ಹಂತ ಹಂತವಾಗಿ ವಿಮಾನ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ. ಕುವೈಟ್ ನಲ್ಲಿ ಕರಾವಳಿಯರೂ ಸೇರಿದಂತೆ ಸಾವಿರಾರು ಮಂದಿ ಕರ್ನಾಟಕದ ಅನಿವಾಸಿಗಳು ಸಂಕಷ್ಟದಲ್ಲಿದ್ದು, ಮರಳಿ ಊರಿಗೆ ಕರೆ ತರುವಂಟೆ ಅವರು ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಈ ಹಿನ್ನೆಲೆ ಕೇಂದ್ರ ಸಚಿವ ಸದಾನಂದ ಗೌಡ ಶೀಘ್ರ ಸ್ಪಂಧಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.