ನವದೆಹಲಿ, ಮೇ 18 (Daijiworld News/MB) : ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ (ಜೆಎಂಐ) ವಿಶ್ವವಿದ್ಯಾಲಯ ಆವರಣದಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಯ ವಿದ್ಯಾರ್ಥಿ ಮುಖಂಡನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಪರ್ಷಿಯನ್ ಭಾಷೆಯಲ್ಲಿ ಬಿಎ ಪದವಿ ವ್ಯಾಸಂಗ ಮಾಡುತ್ತಿರುವ ದೆಹಲಿಯ ಶಾಹೀನ್ ಬಾಗ್ ನಿವಾಸಿ 24 ವರ್ಷದ ಆಸಿಫ್ ಇಕ್ಬಾಲ್ ತನ್ಹಾ ಎಂಬಾತನನ್ನು ಬಂಧಿಸಲಾಗಿದ್ದು, ಈತನನ್ನು 2019ರ ಡಿಸೆಂಬರ್ 15ರಂದು ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಸಿಫ್ ಇಸ್ಲಾಮಿಕ್ ವಿದ್ಯಾರ್ಥಿ ಸಂಘಟನೆಯ ಸಕ್ರಿಯ ಸದಸ್ಯನಾಗಿದ್ದು ಸಿಎಎ ವಿರುದ್ಧ ಪ್ರತಿಭಟನೆ ಆಯೋಜಿಸಿದ್ದ ಜಾಮಿಯಾ ಸಮನ್ವಯ ಸಮಿತಿಯ ಪ್ರಮುಖ ಸದಸ್ಯನಾಗಿದ್ದ ಎನ್ನಲಾಗಿದ್ದು ಸಿಎಎ ವಿರೋಧಿಸಿದ ನಡೆದ ಪ್ರತಿಭಟನೆ ಸಂದರ್ಭದಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಭಾಗವಹಿಸಿದ್ದ.
ಗಲಭೆ ನಡೆದ ಮರುದಿನ ಅಂದರೆ 2019 ರ ಡಿಸೆಂಬರ್ 16 ರಂದು ಪೊಲೀಸರು ಈತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು ಈತ ಪ್ರಮುಖ ಆರೋಪಿ ಎಂದು ಉಲ್ಲೇಖ ಮಾಡಿದ್ದರು. ಆತನನ್ನು ಸದ್ಯ ಮೆಟ್ರೋಪಾಲಿಟಿನ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ಮೇ 31ರ ವರೆಗೆ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.