2021ರ ಚುನಾವಣೆಯಲ್ಲಿ ಸ್ಪರ್ಧೆ - ರಾಜಕೀಯ ಪ್ರವೇಶ ಘೋಷಿಸಿದ 'ಅಣ್ಣಾಮಲೈ'
Mon, May 18 2020 09:39:03 AM
ಬೆಂಗಳೂರು, ಮೇ (Daijiworld News/MSP): ಕರ್ನಾಟಕದ ಸಿಂಗಂ ಎಂದೇ ಜನರ ಪ್ರೀತಿ ಗಳಿಸಿದ್ದ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಆ ಬಳಿಕ ರಾಜೀನಾಮೆ ನೀಡಿ ಪೊಲೀಸ್ ಸೇವೆಯಿಂದ ವಿಮುಕ್ತಗೊಂಡ ಅಣ್ಣಾಮಲೈ ಅವರು ತಾವು ರಾಜಕೀಯ ಪ್ರವೇಶ ಮಾಡುವುದಾಗಿ ಘೋಷಿಸಿಕೊಂಡಿದ್ದಾರೆ.
ಈ ವಿಚಾರವನ್ನು ಮೇ.17ರಂದು ನಡೆಸಿದ ತಮ್ಮ ಫೇಸ್ಬುಕ್ ಲೈವ್ನಲ್ಲಿ ಹೇಳಿಕೊಂಡಿದ್ದು, "2021ರ ಏಪ್ರಿಲ್ - ಮೇ ಯಲ್ಲಿ ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಚೆಯನ್ನು ವ್ಯಕ್ತಪಡಿಸಿದ್ದಾರೆ.
'ಮಿಸ್ ಯೂ ಕರ್ನಾಟಕ' ಎಂದು ಮಾತು ಆರಂಭಿಸಿದ ಅಣ್ಣಾಮಲೈ, ಸದ್ಯ ಒಂದು ಪುಸ್ತಕ ಬರೆಯುತ್ತಿದ್ದು, ಮುಂದಿನ ಎರಡು ತಿಂಗಳಲ್ಲಿ ಇದನ್ನು ಪೂರ್ಣಗೊಳಿಸುತ್ತೇನೆ. ಕರ್ನಾಟಕದಲ್ಲಿ 10 ವರ್ಷ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ಈಗ ಮುಂದಿನ ಆಲೋಚನೆ ಬೇರೆ ಇದೆ. ಕುಟುಂಬದ ಜತೆ ಸಮಯ ಕಳೆಯುವುದು, ತಮಿಳುನಾಡು ರಾಜಕೀಯಕ್ಕೆ ಪ್ರವೇಶ ಮಾಡಬೇಕು, ಜನರ ಸೇವೆ ಮಾಡಬೇಕು, ರಾಜಕೀಯ ವ್ಯವಸ್ಥೆ ಬದಲಾಯಿಸಬೇಕು, ಪೊಲೀಸ್ ಅಧಿಕಾರಿಗಳಿಗೆ ಉತ್ತಮ ವಾತಾವರಣ ಕಲ್ಪಿಸಬೇಕು ಎಂದು ಹೇಳಿಕೊಂಡರು.
ಕರ್ನಾಟಕ ನನ್ನ ಕರ್ಮ ಭೂಮಿ, ಪೊಲೀಸ್ ಸೇವೆಯಲ್ಲಿದ್ದಾಗ ಕನ್ನಡಿಗರು ಬೆಟ್ಟದಷ್ಟು ಪ್ರೀತಿ ಕೊಟ್ಟಿದ್ದಾರೆ. ಆ ಪ್ರೀತಿಗೆ ನಾ ಅಭಾರಿ. ನನಗೆ ಜನರೊಂದಿಗೆ ಇದ್ದು ರಾಜಕೀಯ ಸುಧಾರಣೆ ಮಾಡುವ ಆಲೋಚನೆ ಇದೆ ಎಂದು ಹೇಳಿದರು.
ಕೆಲ ದಿನಗಳ ಹಿಂದೆಯಷ್ಟೇ , ದಾಯ್ಜಿವಲ್ಡ್ ವಾಹಿನಿ ನಡೆಸಿದ ಸಂದರ್ಶನದ ವೇಳೆ, ಅಣ್ಣಾಮಲೈ ಅವರು ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಸುಳಿವು ನೀಡಿದ್ದರು. ಆದರೆ ರಾಜಕೀಯ ಪ್ರವೇಶವನ್ನು ಕರ್ನಾಟಕದಲ್ಲಿ ಅಥವಾ ತಮಿಳುನಾಡಿನಲ್ಲಿ ಮಾಡುತ್ತಾರೋ ಎನ್ನುವ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ.