ನವದೆಹಲಿ, ಮೇ 18 (Daijiworld News/MSP): ಲಾಕ್ ಡೌನ್ ಸೇರಿದಂತೆ ಹಲವು ನಿಯಂತ್ರಣ ಹೇರಿದ್ದರೂ, ಭಾರತದಲ್ಲಿ ಕೊರೊನಾ ರಣಕೇಕೆ ಮುಂದುವರಿಸಿದ್ದು, ಒಂದೇ ದಿನ ಬರೋಬ್ಬರಿ 5,242 ಮಂದಿಯಲ್ಲಿ ಮಹಾಮಾರಿ ವೈರಸ್ ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 96,169ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೋಮವಾರ ಮಾಹಿತಿ ನೀಡಿದೆ.
ತಮಿಳುನಾಡು, ಗುಜರಾತ್ , ದೆಹಲಿ, ರಾಜಸ್ಥಾನ, ಮಧ್ಯಪ್ರದೇಶ, ಉತ್ತರಪ್ರದೇಶ, ಪಶ್ಚಿಮಬಂಗಾಳ, ಆಂದ್ರಪ್ರದೇಶದಲ್ಲಿ ಅತಿ ಹೆಚ್ಚಿನ ಸೋಂಕು ಕಂಡುಬಂದಿದ್ದು, ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿ ನಿಂತಿದೆ. ಮಹಾರಾಷ್ಟ್ರ ಒಂದೇ ರಾಜ್ಯದಲ್ಲಿ ಬರೋಬ್ಬರಿ 33,053 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಅಲ್ಲದೆ, 1,198 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಗುಜರಾತ್ ರಾಜ್ಯದಲ್ಲಿ 11,379, ತಮಿಳುನಾಡು 11,224, ದೆಹಲಿಯಲ್ಲಿ 10,054 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ
24 ಗಂಟೆಗಳಲ್ಲಿ 157 ಮಂದಿ ಹೆಮ್ಮಾರಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ ಕೂಡ 3,029 ಕ್ಕೆ ಏರಿಕೆಯಾಗಿದೆ. ಈ ನಡುವೆ 96,169 ಮಂದಿ ಸೋಂಕಿತರ ಪೈಕಿ 36,824 ಸೋಂಕಿನಿಂದ ಗುಣಮುಖರಾಗಿದ್ದು, ಪ್ರಸ್ತುತ ದೇಶದಲ್ಲಿನ್ನೂ 59,345 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.