ನವದೆಹಲಿ, ಮೇ 18 (Daijiworld News/MB) : ಕೊರೊನಾ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಕೈಗೊಂಡ ಕ್ರಮಗಳ ಬಗ್ಗೆ ತನಿಖೆ ನಡೆಯಬೇಕು ಎಂದು ಭಾರತ ಸೇರಿದಂತೆ 62 ದೇಶಗಳು ಒತ್ತಾಯ ಮಾಡಿದೆ.
73ನೇ ವಿಶ್ವ ಆರೋಗ್ಯ ಸಮಾವೇಶದ (ಡಬ್ಲ್ಯುಎಚ್ಎ) ಸಭೆಯು ಇಂದಿನಿಂದ ಆರಂಭವಾಗಲಿದ್ದು ಅಲ್ಲಿ ಪ್ರಸ್ತಾಪಿಸಲಾದ ಕರಡು ನಿರ್ಣಯದಲ್ಲಿ ಕೊರೊನಾ ಸಾಂಕ್ರಾಮಿಕ ರೋಗದ ತಡೆಗೆ ಸಂಬಂಧಿಸಿ ವಿಶ್ವ ಆರೋಗ್ಯ ಸಂಸ್ಥೆ ಕೈಗೊಂಡ ಕ್ರಮ ಹಾಗೂ ಮಾರ್ಗಸೂಚಿಗಳ ಕುರಿತಾಗಿ ತನಿಖೆ ನಡೆಸುವುದು ಮಾತ್ರವಲ್ಲದೇ ಕೊರೊನಾ ಬಿಕ್ಕಟ್ಟಿನ ಕುರಿತಾಗಿ ನಿಷ್ಪಕ್ಷಪಾತ, ಸ್ವತಂತ್ರ ಮತ್ತು ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಲಾಗಿದೆ.
ಈ ಕುರಿತಾಗಿ ಆಸ್ಟ್ರೇಲಿಯಾದ ವಿದೇಶಾಂಗ ಸಚಿವರಾದ ಮರಿಸೆ ಪೇನ್ ಅವರು, ಕೊರೊನಾದಿಂದಾದ ಬಿಕ್ಕಟ್ಟಿನ ಕುರಿತಾಗಿ ತನಿಖೆ ನಡೆಸಲು ಒಮ್ಮೆಲೇ ಡಬ್ಲ್ಯುಎಚ್ಒಗೆ ಅವಕಾಶ ನೀಡುವುದು 'ಕಳ್ಳ ಬೇಟೆಗಾರ ಮತ್ತು ಗೇಮ್ಕೀಪರ್ ಆಗಿ ನಮ್ಮನ್ನೇ ನೋಡುವಂತೆ ಆಗುತ್ತದೆ' ಎಂದು ಹೇಳಿರುವುದಾಗಿ ವರದಿಯಾಗಿದೆ.
ಈ ಪ್ರಸ್ತಾಪವನ್ನು ಐರೋಪ್ಯ ಒಕ್ಕೂಟದ ದೇಶಗಳ ಹೊರತಾಗಿ ಜಪಾನ್, ಬ್ರಿಟನ್, ನ್ಯೂಜಿಲೆಂಡ್, ದಕ್ಷಿಣ ಕೊರಿಯಾ, ಬ್ರೆಜಿಲ್ ಮತ್ತು ಕೆನಡಾಗಳು ಬೆಂಬಲಿಸಿದ್ದು ಈ ಪ್ರಸ್ತಾಪದಲ್ಲಿ ಕೊರೊನಾ ವೈರಸ್ನ ತವರೂರಾದ ಚೀನಾ ಅಥವಾ ಚೀನಾದ ವುಹಾನ್ ಪ್ರಾಂತ್ಯದ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಎಂದು ವರದಿ ತಿಳಿಸಿದೆ.