ಬೆಂಗಳೂರು, ಮೇ 18 (Daijiworld News/MB) : ಕೊರೊನಾ ವಿರುದ್ಧದ ಹೋರಾಟಕ್ಕಾಗಿ ಪ್ರಧಾನಿ ನರೇಂದ್ರಮೋದಿ ಪ್ರಕಟಿಸಿದ ₹20 ಲಕ್ಷ ಕೋಟಿ ಪ್ಯಾಕೇಜ್ ಕನ್ನಡಿಯೊಳಗಿನ ಗಂಟು ಎಂದು ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಟೀಕಿಸಿದ್ದಾರೆ.
ಪ್ಯಾಕೇಜ್ ಕುರಿತಾಗಿ ಆಕ್ರೋಶ ವ್ಯಕ್ತಪಡಿಸಿದ ಅವರು, ಈ ಪ್ಯಾಕೇಜ್ ಟಿವಿ ಪರದೆಯಲ್ಲಿ, ಪತ್ರಿಕೆಗಳ ಪುಟಗಳಲ್ಲಿ ಮಾತ್ರ ಪ್ಯಾಕೇಜ್ ಕಾಣುತ್ತಿದ್ದು ಜನರ ಕೈಗೆ ತಲುಪುತ್ತಿಲ್ಲ. ಪ್ಯಾಕೇಜ್ ಕೇಲವ ಅಂಕಿ ಅಂಶದ ಕಸರತ್ತು ಆಗಿಹೋಗಿದೆ. ಬಡವರು, ಶ್ರಮಿಕರ ಬಗ್ಗೆ ಯಾವ ಪ್ರಸ್ತಾಪವೂ ಇಲ್ಲದ ಈ ಪ್ಯಾಕೇಜ್ ಬೆತ್ತಲೆ ಮನುಷ್ಯನ ಮುಂದೆ ಅರಸನ ಮೆರವಣಿಗೆ ಎಂದು ಲೇವಡಿ ಮಾಡಿದ್ದಾರೆ.
ಮೇಲ್ನೋಟಕ್ಕೆ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ನೀಡಿರುವ ಆರ್ಥಿಕ ನೆರವಿನ ಪ್ಯಾಕೇಜ್ ಬಂಪರ್ ಕೊಡುಗೆಯಂತೆ ಕಾಣುತ್ತದೆ. ಆದರೆ ಅದರೊಳಗಿನ ಗುಟ್ಟು ಬೇರೆಯೇ ಇದೆ. ದೇಶದಲ್ಲಿ ಒಟ್ಟು 6.2 ಲಕ್ಷ ಕೋಟಿ ಕಿರು ಉದ್ದಿಮೆಗಳಿದ್ದು ಈ ಪೈಕಿ 45 ಲಕ್ಷ ದೊಡ್ಡ ಗಾತ್ರದ ಕಿರು ಉದ್ದಿಮೆಗಳಿಗೆ ಈ ನೆರವು ದೊರೆಯುತ್ತದೆ ಎಂದು ತಿಳಿಸಿದ್ದಾರೆ.
ನೊಬೆಲ್ ಪ್ರಶಸ್ತಿ ವಿಜೇತ ವಿದ್ವಾಂಸರು, ಆರ್ಥಿಕ ತಜ್ಞರುಗಳು ಜನರಿಗೆ ದುಡ್ಡು ದೊರೆಯುವಂತೆ ಮಾಡಿ ಎಂದು ಒತ್ತಾಯ ಮಾಡುತ್ತಲ್ಲೇ ಇದ್ದಾರೆ. ಆದರೆ ಮೋದಿ ಮಾತ್ರ ಖಾಲಿಯಾಗಿರುವ ಖಜಾನೆ ಭರ್ತಿ ಮಾಡುವುದಲ್ಲೇ ಮಗ್ನರಾಗಿದ್ದಾರೆ ಎಂದು ಆರೋಪಿಸಿದರು.
ಈ ಪ್ಯಾಕೇಜ್ನಿಂದ ಎಷ್ಟು ಬಡವರಿಗೆ, ಹಸಿದ ಹೊಟ್ಟೆಗಳಿಗೆ, ಕಾರ್ಮಿಕರಿಗೆ, ರೈತರಿಗೆ, ಸಣ್ಣ ವ್ಯಾಪಾರಿಗಳಿಗೆ ನೀಡಲಾಗಿದೆ? ಅವರಿಗೆ ಈ ಪ್ಯಾಕೇಜ್ನಿಂದ ಆದ ಲಾಭವೇನು? ಎಂದು ಪ್ರಶ್ನಿಸಿದ ಅವರು ಈ ಬಗ್ಗೆ ಸರಿಯಾದ ವಿವರ ನೀಡಬೇಕು ಎಂದು ಆಗ್ರಹಿಸಿದ್ದಾರೆ.