ಹುಬ್ಬಳ್ಳಿ, ಮೇ 18 (Daijiworld News/MSP): ಕೇಂದ್ರ ಸರ್ಕಾರ ಕೊರೋನಾ ಸಂದರ್ಭದಲ್ಲಿ ಘೋಷಿಸಿರುವ 20 ಲಕ್ಷ ಕೋಟಿ ಪ್ಯಾಕೇಜ್ ನಿಂದಾಗಿ ದೇಶದಲ್ಲಿ ಹೊಸ ಮನ್ವಂತರ ಪ್ರಾರಂಭವಾಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತವಾರಿ ಸಚಿವರಾದ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಮರ್ಥ ಹಾಗೂ ಗಟ್ಟಿ ನಾಯಕತ್ವದಿಂದಾಗಿ ದೇಶ ಕೊರೋನಾ ಸಾಂಕ್ರಾಮಿಕ ಖಾಯಿಲೆಯನ್ನು ಎದುರಿಸುವಲ್ಲಿ ಶಕ್ತವಾಗಿದೆ. ದೇಶದ 130 ಕೋಟಿ ಜನರ ಬೆಂಬಲ ಪ್ರಧಾನಿಯವರಿಗೆ ಇದೆ. ವಿಶ್ವದ ಮುಂದುವರಿದ ರಾಷ್ಟ್ರಗಳಾದ ಅಮೇರಿಕಾ, ಇಂಗ್ಲೆಂಡ್, ಇಟಲಿ, ಜಪಾನ್ ಚೈನಾ ದೇಶಗಳು ಸಹ ಕೊರೋನಾ ಅಟ್ಟಹಾಸದಿಂದ ನಲುಗಿವೆ.
ದೇಶದಲ್ಲಿ ಕೊರೋನಾ ನಿಯಂತ್ರಣದಲ್ಲಿದೆ. ವಿಶ್ಚದ ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ದೇಶದಲ್ಲಿ ಮರಣ ಪ್ರಮಾಣ ಕಡಿಮೆ ಇದೆ. ಕೊರೋನಾ ಸೋಕಿಂತರಲ್ಲಿ ಅರ್ಧದಷ್ಟು ಜನರು ಗುಣಮುಖರಾಗುತ್ತಿದ್ದಾರೆ.
ಇಡೀ ವಿಶ್ವ ಸಂಕಟದ ಪರಿಸ್ಥಿತಿ ಎದುರಿಸುತ್ತಿದೆ. ದೇಶದ ಒಟ್ಟು ಜಿಡಿಪಿಯ ಶೇ.10 ರಷ್ಟಾಗುವ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಎಲ್ಲಾ ವರ್ಗದ ಜನರನ್ನು ತಲುಪಲಿದೆ. ಹಂತ ಹಂತವಾಗಿ ಈ ಪ್ಯಾಕೇಜ್ ಜಾರಿದ ನಂತರ ದೇಶದ ಆರ್ಥಿಕತೆಯಲ್ಲಿ ಬದಲಾವಣೆಯಾಗುವುದು. ಪ್ಯಾಕೇಜ್ ಘೋಷಣೆಯುಂದಾಗಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆ, ಶೇರು ವಹಿವಾಟಿನಲ್ಲಿ ಚೇತೋಹಾರಿ ಬೆಳವಣಿಗೆ ಕಂಡುಬರುತ್ತಿದೆ. ದೇಶದಲ್ಲಿ ಲಾಕ್ ಡೌನ್ ಸಡಲಿಕೆ ಮಾಡಿ ಕೈಗಾರಿಕೆಗಳು ಮರು ಚಾಲನೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಬೇರೆ ರಾಜ್ಯಗಳಿಗಿಂತ ಮೊದಲೇ ಕರ್ನಾಟಕದಲ್ಲಿ ಕೈಗಾರಿಕೆ್ಳಗಳು ಪುಃನ ಪ್ರಾರಂಭಿಸಲು ಅವಕಾಶ ನೀಡಲಾಯಿತು. ಸೀಲ್ ಡೌನ್ ಹೊರತು ಪಡಿಸಿ ಇತರೆ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆಗಳು ಶುರುವಾಗಿವೆ. ಚೈನಾ ದೇಶದ ಮೇಲೆ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಆಕ್ರೋಶ ಮಡುಗಟ್ಟಿದೆ. ಚೈನಾದಿಂದ ಹೊರ ಬರುವ ಉದ್ದಿಮೆಗಳು ಹಾಗೂ ಬಂಡವಾಳವನ್ನು ಕರ್ನಾಟಕ ರಾಜ್ಯದ ಕಡೆಗೆ ತರಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ನೇತೃತ್ವದಲ್ಲಿ ಟಾಸ್ಕ್ ಪೋರ್ಸ್ ಕಮಿಟಿ ರಚಿಸಲಾಗಿದೆ. ಈಗಾಗಲೇ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಮುಖ್ಯಮಂತ್ರಿ ಹಾಗೂ ಕೈಗಾರಿಕಾ ಮಂತ್ರಿಗಳ ನೇತೃತ್ವದಲ್ಲಿನ ಹೈ ಲೆವಲ್ ಕಮಿಟಿ ರಚಿಸಲಾಗಿದೆ. ಈ ಕಮಿಟಿಯಲ್ಲಿ ಕೈಗಾರಿಕಾ ಸ್ಥಾಪನೆಗೆ ಮುಂದೆ ಬರುವ ಉದ್ಯಮಿಗಳಿಗೆ ಯಾವುದೇ ಕಾನೂನಿನ ತೊಡಕು ಬರದ ಹಾಗೆ ಭೂಮಿ ಹಸ್ತಾಂತರ ಹಾಗೂ ವಿವಿಧ ಇಲಾಖೆಗಳ ಪರವಾನಿಗೆ ಪಡೆಯಲು ಏಕಗವಾಕ್ಷಿ ಯೋಜನೆ ವ್ಯವಸ್ಥೆ ರೂಪಿಸಲಾಗಿದೆ ಎಂದರು.