ನವದೆಹಲಿ, ಮೇ 18 (Daijiworld News/MB) : "ಆಫ್ರಿದಿ, ಇಮ್ರಾನ್ ಮತ್ತು ಬಜ್ವಾ ಜೋಕರ್ಗಳು" ಎಂದು ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಇತ್ತೀಚೆಗೆ ಅವಹೇಳನಕಾರಿಯಾಗಿ ಮಾತನಾಡಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿಯವರಿಗೆ ಸಂಸದ, ಹಿರಿಯ ಕ್ರಿಕೆಟಿಗ ಗೌತಮ್ ಗಂಭೀರ್ ತಿರುಗೇಟು ನೀಡಿದ್ದಾರೆ.
ಇತ್ತೀಚೆಗೆ ಪಾಕ್ ಆಕ್ರಮಿತ ಕಾಶ್ಮೀರದ ಗ್ರಾಮವೊಂದಕ್ಕೆ ತೆರಳಿದ್ದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿಯು, "ಸುಂದರವಾದ ಗ್ರಾಮವಾದ ಇಲ್ಲಿಗೆ ಬರುವ ಆಸೆ ನನಗೆ ಮೊದಲಿನಿಂದಲ್ಲೂ ಇತ್ತು. ಆದರೆ ಈಗ ಆ ಆಸೆ ಈಡೇರಿದೆ. ಪ್ರಸ್ತುತ ವಿಶ್ವದಲ್ಲೇ ಕೊರೊನಾ ರೋಗ ಭೀತಿ ಉಂಟು ಮಾಡಿದೆ. ಆದರೆ ಅದಕ್ಕಿಂತ ದೊಡ್ಡದಾದ ರೋಗ ಇನ್ನೊಂದಿದ್ದು ಅದು ಭಾರತದ ಪ್ರಧಾನಿ ಮೋದಿಯವರ ಮನೋಭಾವ. ಮೋದಿ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಿ ಇಲ್ಲಿಂದ 2 ಕಿಲೋ ಮೀಟರ್ ದೂರದಲ್ಲಿರುವ ಕಾಶ್ಮೀರದಲ್ಲಿ ನೆಲೆಸಿರುವ ನಮ್ಮ ಬಂಧು, ಬಾಂಧವರಿಗೆ ತೊಂದರೆ ಉಂಟು ಮಾಡಿದ್ದು ಈ ಕುರಿತಾಗಿ ಇಲ್ಲಿ ಮಾತ್ರವಲ್ಲದೇ ನಾಳೆ ದೇವರ ಮುಂದೆ ಉತ್ತರಿಸಬೇಕಾಗುತ್ತದೆ" ಎಂದು ಹೇಳಿದ್ದರು.
ಈ ಕುರಿತಾಗಿ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಗೌತಮ್ ಗಂಭೀರ್, "ಪಾಕಿಸ್ತಾನದ ಸೇನೆಯಲ್ಲಿ ಏಳು ಲಕ್ಷ ಸೈನಿಕರಿದ್ದು ಅವರಿಗೆ 20 ಕೋಟಿ ಜನರ ಬೆಂಬಲವಿದೆ ಎಂದು 16 ರ ಬಾಲಕ ಆಫ್ರಿದಿ ಹೇಳಿದ್ದಾನೆ. ಆದರೂ ಕಾಶ್ಮೀರಕ್ಕಾಗಿ ಪಾಕ್ 70 ವರ್ಷದಿಂದ ಭಿಕ್ಷೆ ಬೇಡುತ್ತಿದೆ. ಆಫ್ರಿದಿ, ಇಮ್ರಾನ್ ಹಾಗೂ ಬಂಜ್ವಾನಂತಹ ಜೋಕರ್ಗಳು ಪಾಕಿಸ್ತಾನದ ಜನರನ್ನು ಮೂರ್ಖರನ್ನಾಗಿಸಲು ಭಾರತ ಮತ್ತು ನಮ್ಮ ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ಸದಾ ವಿಷ ಕಾರುತ್ತಲೇ ಇರುತ್ತಾರೆ. ಆದರೆ ನಿಮಗೆ ಜಡ್ಜ್ಮೆಂಟ್ ಡೇ ವರೆಗೂ ಕಾಶ್ಮೀರ ದೊರಕುವುದಿಲ್ಲ. ಬಾಂಗ್ಲಾದೇಶ ನೆನಪಿದೆಯಲ್ಲವೇ?" ಎಂದು ಪ್ರಶ್ನಿಸಿದ್ದಾರೆ.
ಕ್ರಿಕೆಟ್ ಆಡುತ್ತಿದ್ದ ಸಮಯದಿಂದಲ್ಲೇ ಗಂಭೀರ್ ಹಾಗೂ ಆಫ್ರಿದಿ ನಡುವೆ ಮನತ್ಸಾಪಗಳು ಇದ್ದು ಇತ್ತೀಚೆಗೆ ಆಫ್ರಿದಿ ತನ್ನ ಪುಸ್ತಕದಲ್ಲಿ ಗಂಭೀರ್ ವಿರುದ್ಧ ಟೀಕೆ ಮಾಡಿದ್ದರು. ಈ ಬಗ್ಗೆ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದ ಗೌತಮ್ ಗಂಭೀರ್, "ನಾನು ಎಂದಿಗೂ ದಗಾಕೋರರು, ಸುಳ್ಳುಗಾರರು ಮತ್ತು ವಂಚಕರನ್ನು ದ್ವೇಷಿಸುತ್ತೇನೆ" ಎಂದು ಹೇಳಿದ್ದರು.