ಬೆಂಗಳೂರು, ಮೇ 18 (DaijiworldNews/PY) : ಇಂದು ಸಿಎಂ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಬಸ್ ಸಂಚಾರದ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ. ಬಹುತೇಕ ನಾಳೆ ರಾಜ್ಯಾದ್ಯಂತ ಬಸ್ ಸಂಚಾರ ಪ್ರಾರಂಭವಾಗಲಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಕೆಂಪು ವಲಯ ಹಾಗೂ ಕಂಟೈನ್ಮೆಂಟ್ ಪ್ರದೇಶಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ಕಡೆ ಬಸ್ ಸಂಚಾರ ಪ್ರಾರಂಭ ಮಾಡುವ ಸಂಕಲ್ಪ ಮಾಡಲಾಗಿದೆ ಎಂದು ತಿಳಿಸಿದರು.
ಬಸ್ ಸಂಚಾರದ ಬಗ್ಗೆ ರಾಜ್ಯ ಸರ್ಕಾರಗಳು ನಿರ್ಧಾರ ಕೈಗೊಳ್ಳಬಹುದು ಎಂದು ಕೇಂದ್ರ ಸರ್ಕಾರದಿಂದ ಸುತ್ತೋಲೆ ಬಂದಿದೆ. ಹಾಗಾಗಿ ಇಂದು ನಡೆಯುವ ಸಭೆಯಲ್ಲಿ ಬಸ್ ಸಂಚಾರಕ್ಕೆ ನಿಯಮಗಳನ್ನು ರೂಪಿಸುತ್ತೇವೆ. ಅಂತರ್ ಜಿಲ್ಲಾ ಹಾಗೂ ಅಂತರ್ ರಾಜ್ಯ ಬಸ್ ಸಂಚಾರದ ಸಂಬಂಧ ನಿಯಮ ರೂಪಿಸುತ್ತೇವೆ. ಆದರೆ, ಬೆಂಗಳೂರಿನಲ್ಲಿ ಬಸ್ ಸಂಚಾರ ಕಷ್ಟ. ಏಕೆಂದರೆ, ಬೆಂಗಳೂರು ಕೆಂಪು ವಲಯ ಆಗಿರುವ ಕಾರಣ ಮುಂಜಾಗ್ರತೆ ವಹಿಸಿ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸುತ್ತೇವೆ ಎಂದರು.
ಎಷ್ಟು ಬಸ್ಸುಗಳನ್ನು ಬೆಂಗಳೂರಿನಲ್ಲಿ ರಸ್ತೆಗೆ ಇಳಿಸಬೇಕು ಎನ್ನುವುದರ ಬಗ್ಗೆ ಇಂದು ತೀರ್ಮಾನ ಮಾಡುತ್ತೇವೆ. ಅಲ್ಲದೇ, ಬಸ್ನಲ್ಲಿ ಎಷ್ಟು ಜನ ಇರಬೇಕು ಎಂಬುದರ ವಿಚಾರವಾಗಿಯೂ ನಿರ್ಧರಿಸುತ್ತೇವೆ. ಬಸ್ ಸಂಚಾರಕ್ಕೆ ಸೀಟಿಂಗ್ ಕೆಪಾಸಿಟಿಯ ಆಧಾರದ ಮೇಲೆ ಅವಕಾಶ ಕೇಳಿದ್ದೇನೆ. ಪ್ರಸ್ತುತ ಬಸ್ ಸಂಚಾರದಿಂದ ನಷ್ಟವಾಗುತ್ತದೆ ಎಂಬುದು ತಿಳಿದಿದೆ. ಆದರೆ, ಸಾಮಾಜಿಕ ಸೇವೆಯನ್ನು ತಿಳಿದು ಬಸ್ ಸೇವೆಗೆ ಮುಂದಾಗಿದ್ದೇವೆ ಎಂದು ಹೇಳಿದರು.
ಬೇರೆ ರಾಜ್ಯಗಳಿಗೆ ಬಸ್ ಸಂಚಾರವನ್ನು ಆರಂಭ ಮಾಡಲು ಆಯಾ ರಾಜ್ಯ ಅನುಮತಿ ನೀಡಬೇಕು. ಆದರೆ, ಎಲ್ಲಾ ಪ್ರದೇಶಗಳಿಗೂ ಬಸ್ ಸಂಚಾರ ಮಾಡುವುದು ಸುಲಭವಲ್ಲ. ಏಕೆಂದರೆ, ಮುಂಬೈನಲ್ಲಿ ಹಾಗೂ ಪುಣೆಯಲ್ಲಿ ಕೊರೊನಾ ಹೆಚ್ಚಾಗುತ್ತಿದೆ. ಹಾಗಾಗಿ ರಾಜ್ಯದಿಂದ ಅಲ್ಲಿಗೆ ನಾವು ಬಸ್ ಬಿಡಲು ಆಗುವುದಿಲ್ಲ. ಎಲ್ಲಾ ರಾಜ್ಯದಲ್ಲೂ ಕೊರೊನಾ ಇದೆ. ಆದರೆ ಬೇರೆ ರಾಜ್ಯದಲ್ಲಿ ಕೊರೊನಾ ಸೋಂಕು ಇಲ್ಲದ ಪ್ರದೇಶಗಳಿಗೆ ಬಸ್ ಬಿಡಲಾಗುತ್ತದೆ ಎಂದು ತಿಳಿಸಿದರು.
ಬಳಿಕ ಖಾಸಗಿ ಬಸ್ ಸಂಚಾರದ ವಿಚಾರದ ಬಗ್ಗೆ ಮಾತನಾಡಿದ ಅವರು, ಸದ್ಯಕ್ಕಂತು ಖಾಸಗಿ ಬಸ್ಗಳ ಸಂಚಾರ ಇಲ್ಲ. ಖಾಸಗಿ ಬಸ್ಗಳ ಸಮಸ್ಯೆ ನಮಗಿಂಗ ಜಾಸ್ತಿ ಇದೆ. ಇಂದು ಖಾಸಗಿ ಬಸ್ ಆರಂಭದ ವಿಚಾರವಾಗಿಯೂ ತೀರ್ಮಾನ ಮಾಡುತ್ತೇವೆ. ಅಲ್ಲದೇ ಇಂದಿನ ಸಭೆಯಲ್ಲಿ ಮುಖ್ಯವಾಗಿ ಬಸ್ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವಿಚಾರವಾಗಿ ಹಾಗೂ ಸಿಬ್ಬಂದಿಗಳ ಪರೀಕ್ಷೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು.