ಬೆಂಗಳೂರು, ಮೇ 18 (DaijiworldNews/PY) : ಲಾಕ್ಡೌನ್ 4.0 ಮಾರ್ಗಸೂಚಿ ನಿಟ್ಟಿನಲ್ಲಿ ಭಾನುವಾರ ರಾಜ್ಯದಲ್ಲಿ ಮದ್ಯ ಸಿಗುವುದಿಲ್ಲ. ಮೇ 31ರವರೆಗೆ ರಾಜ್ಯದಲ್ಲಿ ಪ್ರತೀ ಭಾನುವಾರ ಸಂಪೂರ್ಣ ಲಾಕ್ಡೌನ್ ಇರಲಿದ್ದು, ಎಲ್ಲಾ ವ್ಯಾಪಾರಗಳು ಸೇರಿದಂತೆ ಮದ್ಯದಂಗಡಿಗಳು ಬಂದ್ ಆಗಲಿವೆ.
ಲಾಕ್ಡೌನ್ 4.0 ಮಾರ್ಗಸೂಚಿ ನಿಟ್ಟಿನಲ್ಲಿ ಸಿಎಂ ಬಿಎಸ್ವೈ ಅವರು ಅಧಿಕಾರಿಗಳು, ತಜ್ಞರೊಂದಿಗೆ ಸಭೆ ನಡೆಸಿ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಂಟೈನ್ಮೆಂಟ್ ಪ್ರದೇಶ ಹೊರತುಪಡಿಸಿ ಉಳಿದ ಭಾಗಗಳಲ್ಲಿ ಸಾರಿಗೆ ವಾಹನಗಳು ಸಂಚಾರ ಮಾಡಲಿವೆ. ಆದರೆ, ಒಂದು ಬಸ್ನಲ್ಲಿ ಕೇವಲ 30 ಜನರಿಗೆ ಮಾತ್ರ ಪ್ರಯಾಣ ಮಾಡಲು ಅವಕಾಶ. ಸರ್ಕಾರ ಬಸ್ ದರದಲ್ಲಿ ಯಾವುದೇ ಏರಿಕೆಯನ್ನು ಮಾಡಿಲ್ಲ ಎಂದರು.
ಆಟೋ, ಕ್ಯಾಬ್ನಲ್ಲಿ ಪ್ರಯಾಣ ಮಾಡುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಚಾಲಕನನ್ನು ಹೊರತುಪಡಿಸಿ ಆಟೋ, ಟ್ಯಾಕ್ಸಿಗಳಲ್ಲಿ ಇಬ್ಬರಿಗೆ ಮಾತ್ರ ಪ್ರಯಾಣ ಮಾಡಬಹುದು. ಸಂಜೆ 7 ರಿಂದ ರಾತ್ರಿ 7ರವರೆಗೆ ಕಫ್ರ್ಯೂ ಮುಂದುವರಿಯಲಿದೆ. ಕ್ರೀಂಡಾಂಗಣ ತೆರೆಯಲಾಗುವುದು ಆದರೆ ಗುಂಪು ಗುಂಪಾಗಿ ಸೇರುವಂತಿಲ್ಲ. ಜಿಮ್ ಓಪನ್ ಮಾಡಲು ಅವಕಾಶವಿಲ್ಲ. ಫಾಸ್ಟ್ ಫುಡ್ ಹಾಗೂ ಪಾನಿಪುರಿ ಸೇರಿದಂತೆ ಬೀದಿ ಬದಿ ವ್ಯಾಪಾರ ಮಾಡಬಹುದಾಗಿದೆ ಎಂದು ಹೇಳಿದ್ದಾರೆ.