ನವದೆಹಲಿ, ಮೇ 18 (Daijiworld News/MB) : ಕೊರೊನಾ ಲಾಕ್ಡೌನ್ ಕಾರಣದಿಂದಾಗಿ ಬಾಕಿಯಾಗಿರುವ ಸಿಬಿಎಸ್ಇಯ 10 ಮತ್ತು 12ನೇ ತರಗತಿಯ ಪರೀಕ್ಷಾ ವೇಳಾಪಟ್ಟಿಯನ್ನು ಸೋಮವಾರ ಸಿಬಿಎಸ್ಇಯು ಪ್ರಕಟಿಸಿದ್ದು ಜುಲೈ 1ರಿಂದ 15ರ ವರೆಗೆ ಪರೀಕ್ಷೆಗಳು ನಡೆಯಲಿವೆ.
ಈ ಕುರಿತು ಮಾಹಿತಿ ನೀಡಿರುವ ಸಿಬಿಎಸ್ಇ ಪರೀಕ್ಷಾ ನಿಯಂತ್ರಕ ಸಂಯಮ್ ಭಾರದ್ವಾಜ್, 10ನೇ ತರಗತಿಯ ಪರೀಕ್ಷೆ ಈಶಾನ್ಯ ದೆಹಲಿಯಲ್ಲಿ ಮಾತ್ರ ಬಾಕಿಯಾಗಿದ್ದು ಜುಲೈ 1ರಿಂದ 10ನೇ ತರಗತಿ ಪರೀಕ್ಷೆ ಆರಂಭವಾಗಲಿದ್ದು ನಾಲ್ಕು ದಿನಾಂಕ ನಿಗದಿ ಮಾಡಲಾಗಿದೆ. ಮೊದಲು ಸಮಾಜ ವಿಜ್ಞಾನ ವಿಷಯ ಪರೀಕ್ಷೆ ನಡೆಯಲಿದ್ದು ಬಳಿಕ ಮರುದಿನ ವಿಜ್ಞಾನ ಪರೀಕ್ಷೆ ನಡೆಸಲಾಗುತ್ತದೆ. ಜುಲೈ 10ರಂದು ಹಿಂದಿ ಭಾಷೆಯ ಉಭಯ ಕೋರ್ಸ್ಗಳಿಗೆ ಮತ್ತು 15ರಂದು ಇಂಗ್ಲಿಷ್ ಭಾಷೆಯ ಉಭಯ ಕೋರ್ಸ್ಗಳಿಗೆ ಪರೀಕ್ಷೆ ನಡೆಯಲಿದ. 12ನೇ ತರಗತಿಯವರಿಗೆ ಜುಲೈ 1ರಂದು ಹೋಮ್ ಸೈನ್ಸಸ್ ಹಾಗೂ ಮರುದಿನ ಹಿಂದಿ ಭಾಷೆಯ ಉಭಯ ಕೋರ್ಸ್ಗಳಿಗೆ ಪರೀಕ್ಷೆ ನಡೆಯಲಿದೆ. 12ನೇ ತರಗತಿಯವರಿಗೆ ಜುಲೈ 9ರಂದು ಬ್ಯುಸಿನೆಸ್ ಸ್ಟಡೀಸ್, ಜುಲೈ 10ರಂದು ಬಯೋಟೆಕ್ನಾಲಜಿ ಮತ್ತು ಜುಲೈ 11ರಂದು ಜಿಯೋಗ್ರಫಿ ವಿಷಯಗಳ ಪರೀಕ್ಷೆ ನಡೆಯಲಿವೆ ಎಂದು ತಿಳಿಸಿದ್ದಾರೆ.
ಇನ್ನು ಪರೀಕ್ಷಾ ಕೇಂದ್ರಗಳಿಗೆ ಬರುವ ಸಂದರ್ಭದಲ್ಲಿ ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಸ್ಯಾನಿಟೈಸರ್ಗಳನ್ನು ಅವರೇ ತರಬೇಕು. ಮಕ್ಕಳ ಆರೋಗ್ಯ ಸ್ಥಿತಿ ಚೆನ್ನಾಗಿದೆ ಎಂಬುದರ ದೃಢಿಕರಣವನ್ನು ಪೋಷಕರು ನೀಡಬೇಕು ಎಂದು ಹೇಳಿದ್ದಾರೆ