ಬೆಂಗಳೂರು, ಮೇ 18 (Daijiworld News/MSP): ಕೊರೊನಾ ಕಾರಣದಿಂದ ಮುಂದೂಡಲಾಗಿದ್ದ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಜೂನ್ 25ರಿಂದ ಜುಲೈ 4 ರವರೆಗೆ ಹಾಗೂ ಬಾಕಿ ಉಳಿದಿದ್ದ ಪಿಯುಸಿಯ ಇಂಗ್ಲೀಷ್ ಪರೀಕ್ಷೆ ಜೂನ್ 18ರಂದು ನಡೆಸಲು ಸರಕಾರ ತೀರ್ಮಾನಿಸಿದೆ.
ಈ ಬಗ್ಗೆ ಪತ್ರಿಕಾಗೋಷ್ಟಿ ನಡೆಸಿದ ಸಚಿವ ಸುರೇಶ್ ಕುಮಾರ್, ಕೊರೊನಾ ಕಾರಣದಿಂದ ಹಲವು ಮುನ್ನೆಚ್ಚರಿಕೆ ವಹಿಸಲಾಗುತ್ತದೆ, ರಾಜ್ಯದಲ್ಲಿ 2879 ಪರೀಕ್ಷಾ ಕೇಂದ್ರಗಳಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯಲಿದ್ದು ವಿದ್ಯಾರ್ಥಿಗಳಿಗೆ ಮಾಸ್ಕ್ ಕಡ್ದಾಯ ಎಂದಿದ್ದಾರೆ.
SLC ಪರೀಕ್ಷೆ ಮಾರ್ಚ್ 27 ರಿಂದ ಏಪ್ರಿಲ್ 9ರ ತನಕ ನಡೆಯಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಮುಂದೂಡಲಾಗಿತ್ತು. ಇದೀಗ ಜೂನ್ 25ರಿಂದ ಜುಲೈ 4 ರವರೆಗೆ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ರಾಜ್ಯಾದ್ಯಾಂತ 8,48,196 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಎಲ್ಲಾ ಸೆಂಟರ್ ರಲ್ಲಿ ಥರ್ಮಲ್ ಸ್ಕ್ಯಾನರ್ ವ್ಯವಸ್ಥೆ ಮಾಡಲಾಗುತ್ತದೆ. ಎಲ್ಲಾ ವಿದ್ಯಾರ್ಥಿಗಳು ಸ್ಯಾನಿಟೈಸರ್ ಬಳಸಬೇಕು, ಇದಕ್ಕಾಗಿ ರಾಜ್ಯ ಸ್ಕೌಟ್ ಮತ್ತು ಗೈಡ್ಸ್ ನ ಸಹಾಯ ದೊರೆಯಲಿದೆ . ಅಲ್ಲದೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ವಿದ್ಯಾರ್ಥಿಗಳ ತಪಾಸಣೆ ಮಾಡ್ತಾರೆ. ಪರೀಕ್ಷೆ ಆರಂಭಕ್ಕೂ ಮೊದಲು ಎಲ್ಲಾ ಕೊಠಡಿಗಳನ್ನು ಸ್ಯಾನಿಟೈಸ್ ಮಾಡುತ್ತೇವೆ ಎಂದಿದ್ದಾರೆ.
ಮೊರಾರ್ಜಿ ದೇಸಾಯಿ ಶಾಲೆ, ಎಸ್ ಸಿ, ಎಸ್ ಟಿ ಹಾಸ್ಟಲ್ ಗಳನ್ನು ಕ್ವಾರಂಟೈನ್ ಮಾಡಿರುವ ಕಾರಣ ಅಲ್ಲಿನ ವಿದ್ಯಾರ್ಥಿಗಳು ಹತ್ತಿರದ ಶಾಲೆಯಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಗುವುದು. ವಲಸೆ ಕಾರ್ಮಿಕರ ಮಕ್ಕಳಿಗೆ ಕೂಡಾ ಇದೇ ರೀತಿ ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ.