ಬೆಂಗಳೂರು, ಮೇ 18 (Daijiworld News/MSP): ಕರ್ನಾಟಕ ಇಸ್ಲಾಮಿಕ್ ರಿಪಬ್ಲಿಕ್ ಆಗುತ್ತಿದೆಯಾ? ಎಂದು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ. ಈ ಹಿಂದೆ ಸಂಸದೆ ಕರಂದ್ಲಾಜೆ "ಶಿವಮೊಗ್ಗದಲ್ಲಿ ತಬ್ಲಿಘಿಗಳಿಂದ ಕೊರೊನಾ ವೈರಸ್ ಸೋಂಕು ಹರಡಿತು" ಎಂದು ವಿವಾದಾತ್ಮಕ ಟ್ವೀಟ್ ಮಾಡಿದ್ದರು. ಇದಕ್ಕೆ ವಿರುದ್ದವಾಗಿ 'ಅರೆಸ್ಟ್ ಶೋಭಾ' ಎಂಬ ಟ್ವಿಟ್ಟರ್ ಅಭಿಯಾನ ಪ್ರಾರಂಭವಾಗಿತ್ತು.
ಇದೀಗ ಮತ್ತೊಂದು ಟ್ವೀಟ್ ಮಾಡಿರುವ ಸಂಸದೆ "ದಾವಣಗೆರೆಯಲ್ಲಿ ಮತಾಂಧರು ಹಿಂದೂಗಳ ಜವಳಿ ಅಂಗಡಿಯಲ್ಲಿ ಬಟ್ಟೆಬರೆ ಖರೀದಿ ಮಾಡದಂತೆ ಮುಸ್ಲಿಂ ಮಹಿಳೆಯರಿಗೆ ಒತ್ತಡ ಹೇರುತ್ತಿದ್ದಾರೆ ಎಂದು ವಿಡಿಯೋ ಸಮೇತ ಟ್ವೀಟ್ ಮಾಡಿದ್ದಾರೆ.
ಕರ್ನಾಟಕ ಇಸ್ಲಾಮಿಕ್ ರಿಪಬ್ಲಿಕ್ ಆಗುತ್ತಿದೆಯಾ.? ಎಂದು ಪ್ರಶ್ನೆ ಮಾಡಿರುವ ಸಂಸದೆ ಶೋಭಾ, ಧಾರ್ಮಿಕ ಮೂಲಭೂತವಾದಿಗಳು ಹೇರುತ್ತಿರುವ ಷರಿಯಾ ಕಾನೂನಿಗೆ ಪ್ರತಿಯಾಗಿ ಪ್ರಜಾಪ್ರಭುತ್ವ ಭಾರತದ ಕಾನೂನಿನ ರುಚಿ ತೋರಿಸಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ಟ್ಯಾಗ್ ಮಾಡಿದ್ದಾರೆ
ಇದಾದ ಬಳಿಕ ಸಿಎಂ ಯಡಿಯೂರಪ್ಪ ಹಾಗೂ ರಾಜ್ಯ ಪೊಲೀಸ್ ಮಹಾ ನಿರ್ದೇಶಕರನ್ನು ಟ್ಯಾಗ್ ಮಾಡಿ ಮತ್ತೊಂದು ಟ್ವೀಟ್ ಮಾಡಿರುವ ಶೋಭಾ, ಧರ್ಮಗಳ ನಡುವೆ ದ್ವೇಷ ಬಿತ್ತುತ್ತಿರುವ ಈ ಮತಾಂಧರನ್ನು ಕೂಡಲೇ ಬಂಧಿಸಿ ಎಂದು ಒತ್ತಾಯಿಸಿದ್ದಾರೆ.