ಬೆಂಗಳೂರು, ಮೇ 18 (DaijiworldNews/PY) : ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಬೀದಿಬದಿ ವ್ಯಾಪಾರಿಗಳು, ಆಟೋರಿಕ್ಷಾ, ಕ್ಯಾಬ್ ಚಾಲಕರ ನೋಂದಣಿ ಗೊಂದಲ ತಕ್ಷಣ ಬಗೆಹರಿಸಿ. ಬದುಕಿರುವಾಗಲೇ ಅವರಿಗೆ ಪರಿಹಾರವನ್ನು ನೀಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ಮುಖ್ಯಮಂತ್ರಿ ಬಿಎಸ್ವೈ ಅವರೇ, ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಬೀದಿಬದಿ ವ್ಯಾಪಾರಿಗಳು, ಆಟೋರಿಕ್ಷಾ, ಕ್ಯಾಬ್ ಚಾಲಕರ ನೋಂದಣಿ ಗೊಂದಲ ತಕ್ಷಣ ಬಗೆಹರಿಸಿ. ಅವರು ಬದುಕಿದ್ದಾಗಲೇ ಮಾಸಿಕ 10,000 ರುಪಾಯಿ ಪರಿಹಾರ ನೀಡಿ. ಜಿಮ್, ಫಿಟ್ನೆಸ್ ಕೇಂದ್ರಗಳನ್ನು ತೆರೆಯಲು ಅವಕಾಶ ಮಾಡಿಕೊಡಿ ಎಂದು ಉಲ್ಲೇಖಿಸಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಹಿಂದೆ ಸುದ್ದಿಗೋಷ್ಠಿ ನಡೆಸಿ, ಕೇಂದ್ರ ಸರ್ಕಾರವು ಬೀದಿ ಬದಿ ವ್ಯಾಪಾರಿಗಳ ನೆರವಿಗೆ ಸ್ಪಂದಿಸಿದ್ದು, 5 ಸಾವಿರ ಕೊಟಿ ರೂ. ಸಾಲ ನೀಡಲಾಗುವುದು. ಸರ್ಕಾರವು ಒಂದು ತಿಂಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರಲಿದೆ. ಡಿಜಿಟಲ್ ಮೂಲಕ ಸಾಲ ಪಡೆದ ವ್ಯಾಪಾರಸ್ಥರು ವ್ಯವಹಾರ ನಡೆಸಿದರೆ ಹೆಚ್ಚು ಲಾಭವಾಗಲಿದೆ. 5 ಸಾವಿರ ಕೋಟಿ ರೂ. ಅನ್ನು ಇದಕ್ಕಾಗಿಯೇ ಮೀಸಲಿಡಲಾಗಿದೆ. 50 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ಈ ಯೋಜನೆಯಿಂದ ಲಾಭ ದೊರಕಲಿದೆ. ಬೀದಿ ಬದಿಯ ವ್ಯಾಪಾರಿಗಳಿಗೆ ಸಾಲ ನೀಡಲು ಮುಂದಿನ 1 ತಿಂಗಳ ಒಳಗಡೆ ವಿಶೇಷ ಯೋಜನೆಯನ್ನು ಜಾರಿಗೆ ತರಲಾಗುವುದು. ಕನಿಷ್ಟ 10 ಸಾವಿರ ರೂ. ಬಂಡವಾಳ ಹೂಡುವ ಈ ಯೋಜನೆಯು ಬೀದಿ ಬದಿಯ ವ್ಯಾಪಾರಿಗಳಿಗೆ ನೆರವಾಗಲಿದೆ ಎಂದು ತಿಳಿಸಿದ್ದರು.