ಮಡಿಕೇರಿ, ಮೇ 18 (Daijiworld News/MSP): ಮುಂಬೈನಿಂದ ಕೊಡಗು ಜಿಲ್ಲೆಗೆ ಆಗಮಿಸಿದ್ದ 45 ವರ್ಷದ ಮಡಿಕೇರಿ ತಾಲ್ಲೂಕಿನ ಮಹಿಳೆಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಅವರು ಮಹಿಳೆಯ ಪೇಷಂಟ್ ಸಂಖ್ಯೆ 1224 ಆಗಿದ್ದು. ಇವರು ಮುಂಬೈನಲ್ಲಿ ಹೋಂ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ತಿಳಿದು ಬಂದಿದೆ. ಮೇ 14 ರಂದು ಮುಂಬೈನಿಂದ ಮಂಗಳೂರಿಗೆ ಖಾಸಗಿ ಟ್ಯಾಕ್ಸಿಯಲ್ಲಿ ಮಂಗಳೂರು ಮತ್ತು ಉಡುಪಿ ಜಿಲ್ಲೆಯವರೊಂದಿಗೆ ಹೊರಟಿದ್ದಾರೆ. ಇವರಲ್ಲಿ ಕೊಡಗು ಜಿಲ್ಲೆಯವರು ಈ ಮಹಿಳೆಯಾಗಿದ್ದಾರೆ ಎಂದು ಅವರು ಹೇಳಿದರು.
ನಂತರ ಮಂಗಳೂರಿನ ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ಕೊಡಗು ಜಿಲ್ಲೆಗೆ ತೆರಳಬೇಕಿದ್ದು, ವಾಹನ ವ್ಯವಸ್ಥೆ ಮಾಡಿಕೊಡುವಂತೆ ಕೋರಿದ್ದಾರೆ. ಈ ಹಿನ್ನೆಲೆ ಪೊಲೀಸ್ ಇಲಾಖೆಯವರು ಸಂಪಾಜೆಯವರೆಗೆ ಟ್ಯಾಕ್ಸಿಯಲ್ಲಿ ಕಳುಹಿಸಿದ್ದಾರೆ. ಮೇ 16 ರಂದು ರಾತ್ರಿ 9 ಗಂಟೆಗೆ ಸಂಪಾಜೆ ಚೆಕ್ಪೋಸ್ಟ್ ಆಗಮಿಸಿದ್ದಾರೆ. ಸಂಪಾಜೆ ಚೆಕ್ಪೋಸ್ಟ್ನಲ್ಲಿ ಥರ್ಮೋ ಸ್ಕ್ರೀನಿಂಗ್ ಮಾಡಿ, ಆಂಬುಲೆನ್ಸ್ ಮೂಲಕ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಕರೆತರಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ವಿವರಿಸಿದರು.
ಮಂಗಳೂರಿನಿಂದ ಸಂಪಾಜೆ ವರೆಗೆ ಟ್ಯಾಕ್ಸಿಯಲ್ಲಿ ಕರೆದುಕೊಂಡು ಬಂದ ವಾಹನ ಚಾಲಕರ ಬಗ್ಗೆಯೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅವರಿಗೆ ಮಾಹಿತಿ ನೀಡಲಾಗಿದೆ ಎಂದರು. ಕೋವಿಡ್ ಸೋಂಕಿತ ಮಹಿಳೆಯು ಎಲ್ಲಿಯೂ ಸಹ ನೇರ ಸಂಪರ್ಕ ಹೊಂದಿರುವುದಿಲ್ಲ. ಆದ್ದರಿಂದ ಜಿಲ್ಲೆಯಲ್ಲಿ ಕಂಟೈನ್ಮೆಂಟ್ ಪ್ರದೇಶವಿರುವುದಿಲ್ಲ. ಸಾರ್ವಜನಿಕರು ಯಾವುದೇ ರೀತಿಯ ಆತಂಕ ಪಡಬೇಕಿಲ್ಲ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.