ಬೆಳಗಾವಿ, ಮೇ 18 (DaijiworldNews/PY) : ಮಹಾರಾಷ್ಟ್ರದೊಂದಿಗೆ ಕೃಷ್ಣಾ ನದಿ ನೀರು ವಿನಿಮಯ ಮಾಡಿಕೊಳ್ಳುವ ಬಗ್ಗೆ ಶೀಘ್ರವೇ ಉನ್ನತ ಮಟ್ಟದ ಸಭೆ ನಡೆಸಲಾಗುತ್ತದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಸೋಮವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೀಘ್ರದಲ್ಲಿಯೇ ಮಹಾರಾಷ್ಟ್ರದೊಂದಿಗೆ ನೀರು ವಿನಿಮಯ ಮಾಡುವ ಬಗ್ಗೆ ಬೆಂಗಳೂರಿನಲ್ಲಿ ಆ ರಾಜ್ಯದ ನೀರಾವರಿ ಸಚಿವರೊಂದಿಗೆ ಮಾತುಕತೆ ನಡೆಸಲಾಗುವುದು. ಆದರೆ, ಯಾವಾಗ ಸಭೆ ಮಾಡಲಾಗುವುದು ಎಂದು ನಿಗದಿಯಾಗಿಲ್ಲ. ನೀರು ವಿನಿಮಯ ಮಾಡಿಕೊಳ್ಳುವ ಬಗ್ಗೆ ಪರಸ್ಪರ ಮಾತುಕತೆ ನಡೆಸಿಕೊಂಡ ನಂತರವೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ರೈತರ ಹಿತ ರಕ್ಷಣೆ ಹಾಗೂ ನೀರಾವರಿ ಯೋಜನೆಗಳಿಗೆ ಸಿಎಂ ಬಿಎಸ್ವೈ ಅವರು ಪ್ರಾಮುಖ್ಯತೆ ನೀಡುತ್ತಿದ್ದಾರೆ. ಅವರ ಆಶಯದಂತೆ ಕಾರ್ಯನಿರ್ವಹಿಸಲಾಗುತ್ತದೆ. ರಾಜ್ಯದ ಎಲ್ಲಾ ಜಲಾಶಯಗಳಿಗೆ ಭೇಟಿ ಕೊಟ್ಟು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುತ್ತಿದೆ. ಮೈಸೂರು ಭಾಗದಲ್ಲಿ ಮುಂದಿನ ವಾರ ಪ್ರವಾಸ ಮಾಡಲಿದ್ದೇನೆ. ಬೆಳಗಾವಿ ಜಿಲ್ಲೆಯ ಎಲ್ಲಾ18 ವಿಧಾನಸಭಾ ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳ ಕಾಮಗಾರಿಗಳನ್ನು ಚುರುಕುಗೊಳಿಸಲಾಗುವುದು ಎಂದರು.
ಕೇಂದ್ರ ಜಲ ಆಯೋಗದೊಂದಿಗೆ ಮಹದಾಯಿ ಯೋಜನೆಗೆ ಸಂಬಂಧಪಟ್ಟಂತೆ ಚರ್ಚೆ ನಡೆಸಿ, ಮನವರಿಕೆ ಮಾಡಬೇಕಾಗಿದೆ. ಆದರೆ, ವಿಮಾನ ಸಂಚಾರಕ್ಕೆ ನಿರ್ಬಂಧವಿರುವ ಕಾರಣ ದೆಹಲಿಗೆ ರಸ್ತೆ ಮಾರ್ಗದ ಮೂಲಕ ಹೋಗುವ ವಿಚಾರದ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಸರ್ಕಾರದ ಮಾರ್ಗ ಸೂಚಿ ಹಾಗೂ ವೈದ್ಯರ ಸಲಹೆಯನ್ನು ಪಾಲಿಸಿದರೆ ಕೊರೊನಾ ಸೋಂಕು ತಡೆಗಟ್ಟುವುದು ದೊಡ್ಡ ಸವಾಲಲ್ಲ. ಹಾಗಾಗಿ ಕಡ್ಡಾಯವಾಗಿ ಎಲ್ಲರೂ ಮಾರ್ಗಸೂಚಿಗಳನ್ನು ಪಾಲಿಸಬೇಕು. ಜಿಲ್ಲೆಯ ಜನರ ಸಮಸ್ಯೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರು ಅತ್ಯುತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದರು.