ಬೆಂಗಳೂರು, ಮೇ 18 (DaijiworldNews/PY) : ಪ್ರವಾಹ ಪೀಡಿತ ಪ್ರದೇಶದ ಸಂತ್ರಸ್ತರಿಗೆ ಮನೆಕಟ್ಟಿಕೊಳ್ಳಲು ಈಗಾಗಲೇ ಒಂದನೇ ಹಾಗೂ ಎರಡನೇ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದೇವೆ. ಈಗ ಮೂರನೇ ಕಂತಿನ ಹಣ 66 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರನೇ ಕಂತಿನಲ್ಲಿ ತಲಾ 1 ಲಕ್ಷ ರೂ. ಕೊಡಬೇಕಿದೆ. ಅದಕ್ಕಾಗಿ 66 ಕೋಟಿ ರೂ. ಬಿಡುಗಡೆ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.
ಮರಳು, ಸಿಮೆಂಟ್ ಸೇರಿದಂತೆ ಇತರೆ ವಸ್ತುಗಳು ಸಿಗದ ಕಾರಣ ಹಾಗೂ ಕಾರ್ಮಿಕರ ಕೊರತೆಯಿಂದ ಕೆಲಸ ಪ್ರಾರಂಭವಾಗಿರಲಿಲ್ಲ. ಈ ಕಾರಣದಿಂದ ಮೂರನೇ ಕಂತನ್ನು ಬಿಡುಗಡೆ ಮಾಡಿರಲಿಲ್ಲ ಎಂದು ಹೇಳಿದ್ದಾರೆ.
ಬಿಇಎಂಪಿ ಮೇಲೆ ಕ್ವಾರಂಟೈನ್, ಆರೋಗ್ಯ ತಪಾಸಣೆಯಿಂದ ಖರ್ಚು– ವೆಚ್ಚದ ಹೊರೆ ಜಾಸ್ತಿಯಾಗಿದೆ. ಈ ಕಾರಣದಿಂದ ಎನ್ಡಿಆರ್ಎಫ್ನಿಂದ 25 ಕೋಟಿ ರೂ ಬಿಡುಗಡೆ ಮಾಡಲಾಗುವುದು ಎಂದರು.