ಬೆಳಗಾವಿ, ಮೇ 19 (Daijiworld News/MB) : ಕೊರೊನಾ ಸಮೀಕ್ಷೆಗಾಗಿ ತೆರಳಿದ್ದ ಆಶಾ ಕಾರ್ಯಕರ್ತೆಯರ ಮೇಲೆ ಮದ್ಯ ವ್ಯಸನಿ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ ಘಟನೆ ಇಲ್ಲಿಯ ಜ್ಯೋತಿ ನಗರದಲ್ಲಿ ಸೋಮವಾರ ನಡೆದಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಜ್ಯೋತಿ ನಗರದ ವಿನಾಯಕ ಪ್ರಕಾಶ ಖರಾಗಡೆ ಮದ್ಯ ವ್ಯಸನಿಯಾಗಿದ್ದು ಈತ ಆಶಾಕಾರ್ಯಯರ್ತೆಯರು ಸಮೀಕ್ಷೆ ನಡೆಸಲು ಹೋದ ಸಂದರ್ಭದಲ್ಲಿ ಹಲ್ಲೆ ನಡೆಸಿ ಅವಾಚ್ಯವಾಗಿ ನಿಂದನೆ ಮಾಡಿದ್ದಾನೆ ಎಂದು ಆಶಾ ಕಾರ್ಯಕರ್ತೆಯರು ದೂರು ನೀಡಿದ್ದಾರೆ.
ಆಶಾ ಕಾರ್ಯಕರ್ತೆಯರಾದ ಜಯಾ ಖಿಮಜಿ, ರೂಪಾ ಮುಸಳೆ, ಜ್ಯೋತಿ ಹತ್ತರಗಿ, ಲಕ್ಷ್ಮೀ ಪಾಟೀಲ ಎಂಬವರು ಈ ದೂರು ನೀಡಿದ್ದು ವಿಚಾರಣೆ ನಡೆಸುವ ಸಲುವಾಗಿ ಪೊಲೀಸರು ಆತನ ಬಳಿಗೆ ತೆರಳಿದ್ದು ಆ ಸಂದರ್ಭದಲ್ಲಿ ಪೊಲೀಸರೊಂದಿಗೂ ಆತ ಗಲಾಟೆ ನಡೆಸಿದ್ದಾನೆ. ಆ ಕೂಡಲೇ ಪೊಲೀಸರು ಆತನನ್ನು ಬಂಧನ ಮಾಡಿದ್ದು ಈ ಕುರಿತಾಗಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.