ನೋಯ್ಡಾ, ಮೇ 19 (Daijiworld News/MSP): ಝೀ ಮೀಡಿಯಾದ 28 ಉದ್ಯೋಗಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು ಪರಿಣಾಮ ಝೀ ಮೀಡಿಯಾ ಕಚೇರಿ, ನ್ಯೂಸ್ರೂಮ್ ಮತ್ತು ಸ್ಟುಡಿಯೋಗಳನ್ನು ಸೀಲ್ ಡೌನ್ ಮಾಡಲಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ಜೀ ಸಂಸ್ಥೆಯ ಪ್ರಧಾನ ಸಂಪಾದಕ ಸುಧೀರ್ ಚೌದರಿ ಅವರು, ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ''ಜಾಗತಿಕ ಸಾಂಕ್ರಾಮಿಕ ವೈರಸ್ ಝೀ ಮೀಡಿಯಾದ ಪಾಲಿಗೆ ಮುಳ್ಳಾಗಿದೆ. ಕಳೆದ ಶುಕ್ರವಾರ, ನಮ್ಮ ಸಹೋದ್ಯೋಗಿಯೊಬ್ಬರು ಕೋವಿಡ್-19 ಸೋಂಕಿಗೆ ತುತ್ತಾಗಿದ್ದರು. ಜವಾಬ್ದಾರಿಯುತ ಸಂಘಟನೆಯಾಗಿ, ನಾವು ನೇರ ಅಥವಾ ಪರೋಕ್ಷ ಸಂಪರ್ಕದಲ್ಲಿರಬಹುದಾದ ಎಲ್ಲರ ಸಾಮೂಹಿಕ ಪರೀಕ್ಷೆಯನ್ನು ಪ್ರಾರಂಭಿಸಿದ್ದೇವೆ. ರೋಗಲಕ್ಷಣಗಳಿಲ್ಲದೆ ಇಲ್ಲಿಯವರೆಗೆ ನಮ್ಮ ತಂಡದ 28 ಮಂದಿಗೆ ಕೊರೋನಾ ಇರುವುದು ದೃಢವಾಗಿದೆ. ಇದು ಅತಂತ ಕಷ್ಟದ ಸಮಯವಾಗಿದೆ. ವೈರಸ್ ಗೆ ಭಯ ಪಡದೆ ಕಾರ್ಯನಿರ್ವಹಿಸುತ್ತಿದ್ದ ನಮ್ಮ ಉದ್ಯೋಗಿಗಳ ವೃತ್ತಿಪರತೆಯನ್ನು ಮೆಚ್ಚಲೇಬೇಕು. ಅವರೆಲ್ಲ ಆದಷ್ಟು ಬೇಗ ಗುಣಮುಖರಾಗುತ್ತಾರೆ ಎನ್ನುವ ವಿಶ್ವಾಸ ನನಗಿದೆ'' ಎಂದು ಟ್ವೀಟ್ ಮಾಡಿದ್ದಾರೆ.
ಜೀ ಮಾಧ್ಯಮ ಸಂಸ್ಥೆಯಲ್ಲಿ 2500 ಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದಾರೆ. ಇವರೆಲ್ಲರ ತಪಾಸಣೆ ಹಾಗೂ ಮುನ್ನೆಚ್ಚರಿಕೆಯನ್ನು ನಾವು ತೆಗೆದುಕೊಳ್ಳುತ್ತಿದ್ದೇವೆ. ಜೀ ಸಂಸ್ಥೆ ಕೊರೊನಾ ಹೆದರುವುದಿಲ್ಲ. ಇನ್ನೂ ಹೆಚ್ಚು ದಕ್ಷವಾಗಿ ಕೆಲಸ ಮಾಡುತ್ತದೆ. ನಮ್ಮ ಕಚೇರಿ, ನ್ಯೂಸ್ರೂಮ್ ಮತ್ತು ಸ್ಟುಡಿಯೋಗಳನ್ನು ನೈರ್ಮಲ್ಯೀಕರಣಕ್ಕಾಗಿ ಸೀಲ್ ಮಾಡಲಾಗಿದೆ. ನಾವು ಈ ಕೋವಿಡ್ ಸರಪಳಿಯನ್ನು ಮುರಿಯಲು ಸೋಂಕನ್ನು ಹೋಗಲಾಡಿಸಲು ಉತ್ತಮ ಅಭ್ಯಾಸಗಳನ್ನು ಅನುಸರಿಸುತ್ತಿದ್ದೇವೆ. ಎಲ್ಲಾ ಆರೋಗ್ಯ ಪ್ರೋಟೋಕಾಲ್ಗಳು ಮತ್ತು ಅಧಿಕೃತ ಮಾರ್ಗಸೂಚಿಗಳನ್ನು ಅನುಸರಿಸಲಾಗುತ್ತಿದೆ ಎಂದು ಚೌದರಿ ಹೇಳಿದ್ದಾರೆ.