ಬೆಂಗಳೂರು, ಮೇ 19 (Daijiworld News/MSP): ಕೊವಿಡ್-19 ವಿರುದ್ಧದ ಹೋರಾಟಕ್ಕಾಗಿ ಕೇಂದ್ರ ಸರ್ಕಾರ ಘೋಷಿಸಿದ ಆರ್ಥಿಕ ಪ್ಯಾಕೇಜ್ ಅಸಮಪರ್ಕವಾಗಿದೆ. ಇನ್ನು ಟಿವಿ ಸೀರಿಯಲ್’ನಂತೆ ನಾಲ್ಕು ದಿನ ಘೋಷಿಸಿದ ಪ್ಯಾಕೇಜ್ ಬಗ್ಗೆ ಅಪಸ್ವರ ಎತ್ತಿದ್ರೆ ಅಂತವರನ್ನು ದೇಶದ್ರೋಹಿಗಳಂತೆ ಬಿಂಬಿಸಲಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಂಗಳವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ದೇಶದ ಶೇ. 10ರಷ್ಟು ಜಿಡಿಪಿ ಹಣವನ್ನುಕೇಂದ್ರ ಪ್ಯಾಕೇಜ್ ಎಂದು ಘೋಷಿಸಿದ್ದಾರೆ . ಮೇ 13ರ ಪ್ಯಾಕೇಜ್ 6 ಲಕ್ಷದ 54 ಸಾವಿರ ಕೋಟಿ ಪ್ಯಾಕೇಜ್ ಘೋಷಣೆ ಬಳಿಕ ಮತ್ತೆ ನಾಲ್ಕು ದಿನ ವಿವರಣೆ ನೀಡಿದರು. ಇದರಿಂದ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದುಕೊಂಡಿದ್ದೆ. ಆದರೆ, ಆರ್ಥಿಕ ಪ್ಯಾಕೇಜ್ ಕೂಲಂಕಷವಾಗಿ ಗಮನಿಸಿದಾಗ ಅದರಲ್ಲಿ ಏನೇನು ಇಲ್ಲ ಎಂದರು.
ಇನ್ನು 45 ಲಕ್ಷ ಎಂಎಸ್ಎಂಇಗಳಿಗೆ ಪ್ಯಾಕೇಜ್ ನೀಡಿದ್ದಾರೆ. ಜಿಡಿಪಿಯಲ್ಲಿ ಒಂದು ಪರ್ಸೆಂಟ್ ಅಷ್ಟೇ. ಕೇಂದ್ರ ಸರ್ಕಾರದ ವಿತ್ತ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತೆಗೆದುಕೊಂಡ ನಿರ್ಧಾರ ಪಾರದರ್ಶಕವಾಲ್ಲ. ಪ್ಯಾಕೇಜ್ ವಿವರಣೆಯನ್ನು ನಾನು ನಾಲ್ಕು ದಿನ ಧಾರವಾಹಿಯಂತೆ ಟಿವಿಯಲ್ಲಿ ವೀಕ್ಷಿಸಿದ್ದೆ. ಯಾರ ಸಲಹೆಯಂತೆ ಪ್ಯಾಕೇಜ್ ಘೋಷಿಸಿದ್ರೋ ಗೊತ್ತಿಲ್ಲ, ಎಂದು ಹೆಚ್.ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.