ನವದೆಹಲಿ, ಮೇ 19 (Daijiworld News/MSP): ಕೊರೊನಾ ಲಾಕ್ ಡೌನ್ ನಿಂದ ಜನಜೀವನ ಸಂಧಿಗ್ದ ಪರಿಸ್ಥಿತಿಗೆ ಸಿಲುಕಿದ್ದು, ಇದೇ ಕಾರಣಕ್ಕೆ ಆರ್ಬಿಐ ಸಾಲಗಳ ಮೇಲಿನ ಕಂತು ಪಾವತಿ (ಇಎಂಐ) ಅವಧಿಯನ್ನು ಮೂರು ತಿಂಗಳು ವಿಸ್ತಣೆ ಮಾಡಿತ್ತು. ಆದರೆ ಲಾಕ್ಡೌನ್ ಮುಂದುವರಿದ ಭಾಗವಾಗಿ ಮತ್ತೆ ಇನ್ನೂ ಮೂರು ತಿಂಗಳು ವಿಸ್ತರಿಸುವ ಸಾಧ್ಯತೆ ಇದೆ.
ಕೊರೊನಾವೈರಸ್ ಸೋಂಕು ಹರಡುವಿಕೆ ಮತ್ತಷ್ಟು ಹೆಚ್ಚಾಗಿರುವುದರಿಂದ ಲಾಕ್ಡೌನ್ ಮೇ 31ರವರೆಗೆ ಮುಂದುವರಿಸಲಾಗಿದೆ. ಇದರಿಂದ ಜನರಿಗೆ ಸಾಲದ ಮರುಪಾವತಿ ಕಷ್ಟಸಾಧ್ಯವಾಗಿದೆ. ಹೀಗಾಗಿ ಇನ್ನೂ 3 ತಿಂಗಳು ಗ್ರಾಹಕರಿಗೆ ಇಎಂಐನಿಂದ ಮುಕ್ತಿ ನೀಡಲು ಆರ್ಬಿಐ ಚಿಂತಿಸುತ್ತಿದೆ ಎಂದು ಎಸ್ಬಿಐನ ಸಂಶೋಧನಾ ವರದಿ ಹೇಳಿದೆ.
ಪ್ರಧಾನಿ ಮೋದಿ, ಮಾರ್ಚ್ 24ರಂದು ಮೊದಲ ಲಾಕ್ಡೌನ್ ಘೋಷಿಸಿದಾಗ, ಆರ್ಬಿಐ ತನ್ನೆಲ್ಲ ಬ್ಯಾಂಕುಗಳಲ್ಲಿನ ಸಾಲದ ಗ್ರಾಹಕರಿಗೆ ನೆರವಾಗಲು, ಇಎಂಐ ವಿನಾಯಿತಿಯ ತೀರ್ಮಾನ ಕೈಗೊಂಡಿತ್ತು.
ಈಗಾಗಲೇ ದೇಶ 3 ಲಾಕ್ಡೌನ್ ಕಂಡು 4ನೇ ಹಂತದಲ್ಲಿದ್ದು, ಹಲವರಿಗೆ ಕಂತು ಕಟ್ಟಲು ಅಸಾಧ್ಯವಾಗುತ್ತಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಗೃಹ, ವಾಹನ ಸಾಲ ಮತ್ತು ಇತರೆ ಅವಧಿ ಸಾಲಗಳ ಕಂತು ಪಾವತಿ(ಇಎಂಐ)ಯನ್ನು ಮೂರು ತಿಂಗಳ ಕಾಲ ತಡೆ ಹಿಡಿಯಲು ಬ್ಯಾಂಕ್ಗಳಿಗೆ ಮತ್ತು ಹಣಕಾಸು ಸಂಸ್ಥೆಗಳಿಗೆ ಆರ್ಬಿಐ ಕಳೆದ ಮಾರ್ಚ್ನಲ್ಲಿ ಸೂಚನೆ ನೀಡಿತ್ತು. ಇದೀಗ ಜೂನ್ 7ರ ಸುಮಾರಿಗೆ ಆರ್ಬಿಐ ಮತ್ತೂಮ್ಮೆ ಸಾಲದ ಕಂತು ಪಾವತಿಯ ವಿನಾಯಿತಿ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಒಂದು ವೇಳೆ ಆರ್ಬಿಐ ಈ ನಿರ್ಧಾರ ಪ್ರಕಟಿಸಿದರೆ , ಸಾಲ ಪಡೆದ ಗ್ರಾಹಕರಿಗೆ ಆಗಸ್ಟ್ 31ರವರೆಗೆ ಇಎಂಐನಿಂದ ವಿನಾಯಿತಿ ಸಿಗುವ ಸಾಧ್ಯತೆ ಇದೆ.