ಬೆಂಗಳೂರು, ಮೇ 19 (Daijiworld News/MB) : ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸುವ ಕುರಿತಾಗಿ ರಾಜ್ಯ ಚುನಾವಣಾ ಆಯೋಗ ಸಂವಿಧಾನ ಹಾಗೂ ಕಾಯ್ದೆಯಲ್ಲಿರುವ ಅಂಶಗಳನ್ನು ಪರಿಗಣಿಸಿ ಜವಾಬ್ದಾರಿಯುತವಾಗಿ ತನ್ನ ಹೊಣೆಯನ್ನು ತಿಳಿದು ಕಾರ್ಯ ನಿರ್ವಹಿಸಬೇಕು ಎಂದು ಕಾಂಗ್ರೆಸ್ ಶಾಸಕ ಎಚ್.ಕೆ. ಪಾಟೀಲ ಹೇಳಿದ್ದಾರೆ.
ಈ ಕುರಿತಾಗಿ ರಾಜ್ಯ ಚುನಾವಣಾ ಆಯುಕ್ತರಿಗೆ ಅವರು ಪತ್ರ ಬರೆದಿದ್ದು ಗ್ರಾಮ ಪಂಚಾಯತಿಯ ಅವಧಿ ಪೂರ್ಣಗೊಳ್ಳುವ ಮೊದಲೇ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸುವುದು ಕಡ್ಡಾಯವಾಗಿದ್ದು ಚುನಾವಣಾ ಆಯೋಗ ಸಂವಿಧಾನ ಮತ್ತು ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ ಕಾಯ್ದೆ-1993ನ್ನು ಧಿಕ್ಕರಿಸಿ ಕೆಲಸ ಮಾಡಬಾರದು ಎಂದು ತಿಳಿಸಿದ್ದಾರೆ.
ಕೊರೊನಾ ಲಾಕ್ಡೌನ್ನ್ನು ರಾಜ್ಯದಲ್ಲಿ ಸಡಿಲಗೊಳಿಸಲಾಗಿದೆ. ಕಂಟೈನ್ಮೆಂಟ್ ಸ್ಥಳ ಹೊರತುಪಡಿಸಿ ಉಳಿದೆಡೆ ದಿನನಿತ್ಯದ ಚಟುವಟಿಕೆ, ಸಾರಾಯಿ ಅಂಗಡಿಯಿಂದ ಹಿಡಿದು ಎಲ್ಲವನ್ನು ಆರಂಭಿಸಿರುವ ಈ ಸಂದರ್ಭದಲ್ಲಿ ಚುನಾವಣೆ ಮುಂದೂಡುವ ಯತ್ನ ಮಾಡಬಾರದು ಎಂದು ಹೇಳಿದ್ದಾರೆ.
ಪ್ರಸ್ತುತ ಯಾವುದೇ ಪಂಚಾಯತಿ ಪ್ರದೇಶದಲ್ಲಿ ಕಂಟೈನ್ಮೆಂಟ್ ಪ್ರದೇಶ ಇಲ್ಲ. ಯಾವುದೂ ಕಂಟೈನ್ಮೆಂಟ್ ಪ್ರದೇಶವಲ್ಲವೋ ಅಲ್ಲಿ ಚುನಾವಣೆ ನಡೆಸಲು ಸಮಸ್ಯೆ ಉಂಟಾಗುವುದಿಲ್ಲ. ಸಂವಿಧಾನ ಮತ್ತು ಕಾಯ್ದೆಯನ್ನು ಪಾಲಿಸಲೇಬೇಕಾದ ಉತ್ತರದಾಯಿತ್ವ ಚುನಾವಣಾ ಆಯೋಗದ್ದು ಎಂದು ಹೇಳಿದ್ದಾರೆ.