ಬೆಳಗಾವಿ, ಮೇ 19 (DaijiworldNews/SM): ಮುಂಬೈನಿಂದ ಹೊರಟಿದ್ದ ಗರ್ಭಿಣಿ ಸೇರಿದಂತೆ ಕರಾವಳಿಯ ಪ್ರಯಾಣಿಕರು ಜಿಲ್ಲೆಯ ನಿಪ್ಪಾಣಿ ಟೋಲ್ ಗೇಟ್ ಬಳಿ ಸಂಕಷ್ಟಕ್ಕೀಡಾಗಿದ್ದಾರೆ. ೭ ತಿಂಗಳ ಗರ್ಭಿಣಿ, ೧ ವರ್ಷದ ಮಗು ಸೇರಿದಂತೆ 32 ಮಂದಿ ಪ್ರಯಾಣಿಕರು ಸಂಕಷ್ಟದಲ್ಲಿದ್ದಾರೆ.
ಕರಾವಳಿಗರು ಮುಂಬೈನಿಂದ ವಿಶೇಷ ಬಸ್ ಮೂಲಕ ಆಗಮಿಸುತ್ತಿದ್ದರು. ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಬಸ್ ತಡೆ ಹಿಡಿಯಲಾಗಿದೆ. ದ.ಕ. ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ಒಟ್ಟು 32 ಮಂದಿ ಸಂಕಷ್ಟದಲ್ಲಿದ್ದಾರೆ. ಒಪ್ಪೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಿದೆ ಎಂಬುವುದಾಗಿ ಅವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಇನ್ನು ಪ್ರಯಾಣಿಕರಿಗೆ ಬಸ್ ಹಾಗೂ ಟಿಕೆಟ್ ಬುಕ್ ಮಾಡಿಕೊಟ್ಟಿರುವ ಏಜೆಂಟ್ ಪಾಸ್ ಪಡೆದುಕೊಂಡಿರುವುದಾಗಿ ಹೇಳಿದ್ದಾರೆ. ಇದಕ್ಕೆ ಪ್ರಯಾಣಿಕರು ಕೂಡ ಟಿಕೆಟ್ ದರವನ್ನು ಪಾವತಿಸಿದ್ದಾರೆ. ಆದರೆ, ಸೇವಾ ಸಿಂಧೂ ಆಪ್ ನಲ್ಲಿ ನೋಂದಣಿ ಮಾಡದೆ ಸುಳ್ಳು ಹೇಳಿದ್ದಾರೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
ಇನ್ನು ಮುಂಬೈನಿಂದ ಹೊರಟ ಬಸ್ ನಿಪ್ಪಾಣಿ ತಲುಪುತ್ತಿದ್ದಂತೆ, ಟೋಲ್ ಗೇಟ್ ನಲ್ಲಿ ಬಸ್ ತಡೆಯಲಾಗಿದೆ. ಹಾಗೂ ಇಲ್ಲಿ ಅವರಿಗೆ ಸೇವಾ ಸಿಂಧೂ ಆಪ್ ನೋಂದಣಿಯ ಪಾಸ್ ಬಗ್ಗೆ ವಿಚಾರಿಸಿದಾಗ ಬಸ್ ಚಾಲಕರು ಆ ಬಗ್ಗೆ ಮಾಹಿತಿ ಇಲ್ಲ ಎಂದಿದ್ದಾರೆ. ಈ ಹಿನ್ನೆಲೆ ಬಸ್ ಟೋಲ್ ಗೇಟ್ ನಲ್ಲಿ ತಡೆಹಿಡಿಯಲಾಗಿದೆ.