ಬೆಂಗಳೂರು, ಮೇ 20 (Daijiworld News/MSP): ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಪ್ರಕಟಿಸಿದ ಬೆನ್ನಲ್ಲೇ , ಪರೀಕ್ಷೆ ಎದುರಿಸುವ 8.40 ಲಕ್ಷ ವಿದ್ಯಾರ್ಥಿಗಳಿಗೆ ಹೊಸದಾಗಿ ಪ್ರವೇಶ ಪತ್ರ ವಿತರಿಸಲು ಮಂಡಳಿ ನಿರ್ಧರಿಸಿದೆ.
ಮಾರ್ಚ್ ತಿಂಗಳ ಪರೀಕ್ಷೆಯನ್ನು ಕೊರೊನಾ ಲಾಕ್ ಡೌನ್ ಕಾರಣದಿಂದ ಮುಂದೂಡಲಾಗಿತ್ತು. ಈಗಾಗಲೇ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ವಿತರಿಸಲಾಗಿದ್ದರೂ ಅವು ಈಗಾಗಲೇ ಮಾನ್ಯತೆ ಕಳೆದುಕೊಂಡಿದೆ. ಹೀಗಾಗಿ ಇದೀಗ ಪರೀಕ್ಷಾ ವೇಳಾಪಟ್ಟಿ ಪರಿಷ್ಕರಿಸಿರುವುದರಿಂದ ಹೊಸ ಪ್ರವೇಶ ಪತ್ರ ವಿತರಿಸಲು ನಿರ್ಧರಿಸಲಾಗಿದೆ. ಜೂನ್ ೨ನೇ ವಾರ ಹೊಸ ಪ್ರವೇಶ ಪತ್ರ ವಿದ್ಯಾರ್ಥಿಗಳ ಕೈ ಸೇರುವ ನಿರೀಕ್ಷೆ ಇದೆ.
ವಸತಿ ಶಾಲೆ ಹಾಗೂ ವಲಸೆ ಕಾರ್ಮಿಕರ ಮಕ್ಕಳಿಗೆ ಪರೀಕ್ಷಾ ಕೇಂದ್ರ ಬದಲಾವಣೆಗೆ ಅವಕಾಶ ನೀಡಲಾಗಿರುವ ಕಾರಣ ಎಷ್ಟು ವಿದ್ಯಾರ್ಥಿಗಳು ತಮ್ಮ ಹಳೆಯ ಪರೀಕ್ಷಾ ಕೇಂದ್ರದ ಬದಲು ಹೊಸ ಪರೀಕ್ಷಾ ಕೇಂದ್ರ ಆಯ್ಕೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಮೇ ಅಂತ್ಯಕ್ಕೆ ಮಂಡಳಿಯ ಕೈ ಸೇರಲಿದೆ. ಹೀಗಾಗಿ ಜೂನ್ ಎರಡನೇ ವಾರದಲ್ಲಿ ಪ್ರವೇಶ ಪತ್ರ ವಿದ್ಯಾರ್ಥಿಗಳ ಕೈ ಸೇರಲಿದೆ.
ಪ್ರವೇಶ ಪತ್ರ ಪರೀಕ್ಷೆಗೆ ಹತ್ತು ದಿನ ಮುಂಚಿತವಾಗಿ ಶಾಲೆಗಳಿಗೆ ಆನ್ ಲೈನ್ ಮೂಲಕ ದೊರಕುವಂತೆ ಮಾಡುತ್ತೇವೆ. ಶಾಲಾ ಮುಖ್ಯ ಶಿಕ್ಷಕರು ಇದನ್ನು ಡೌನ್ ಲೋಡ್ ಮಾಡಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಬಹುದಾಗಿದೆ.