ಬೆಂಗಳೂರು, ಮೇ 20 (Daijiworld News/MB) : ಬೆಂಗಳೂರಿನಲ್ಲಿ ಕಬ್ಬಿಣ ಕಳ್ಳನೊಬ್ಬನಿಗೆ ಕೊರೊನಾ ವರದಿ ಪಾಸಿಟಿವ್ ಆಗಿದ್ದು ಇದೀಗ ಹೆಬ್ಬಗೋಡಿ ಠಾಣೆಯ 15 ಪೊಲೀಸರನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿದೆ.
ಆರೋಪಿ ಬಿಬಿಎಂಪಿಯ ಓರ್ವ ಕಾರ್ಪೋರೇಟರ್ ಸಂಬಂಧಿ ಎಂದು ಹೇಳಲಾಗಿದ್ದು ಪಾದರಾಯನಪುರ ನಿವಾಸಿಯಾಗಿದ್ದಾನೆ. ಪ್ರಸ್ತುತ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಆರೋಪಿಯು ಮೇ 17ರಂದು ಕಬ್ಬಿಣ ಕಳ್ಳತನ ಮಾಡುತ್ತಿದ್ದ ವೇಳೆ ಪೊಲೀಸರು ಆತನನ್ನು ಬಂಧನ ಮಾಡಿದ್ದರು. ಈ ಸಂದರ್ಭದಲ್ಲೇ ಸ್ಥಳೀಯರು ಕೂಡಾ ಆತನನ್ನು ಹಿಡಿದು ಥಳಿಸಿದ್ದು ಪೊಲೀಸರು ಠಾಣೆಗೆ ಕರೆದೊಯ್ದಿದ್ದರು.
ಸೋಮವಾರ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದ್ದು ವಿಚಾರಣೆ ವೇಳೆ ಆತ ಪಾದರಾಯನಪುರದ ನಿವಾಸಿ ಎನ್ನುವುದು ತಿಳಿದು ಬಂದಿದೆ. ಈ ಪ್ರದೇಶದ ಹಲವು ಮಂದಿಗೆ ಕೊರೊನಾ ಸೋಂಕು ತಗುಲಿರುವ ಕಾರಣದಿಂದಾಗಿ ಈತನ ಕೊರೊನಾ ತಪಾಸಣೆಯು ನಡೆಸಲಾಗಿದ್ದು ವರದಿ ಪಾಸಿಟಿವ್ ಆಗಿದೆ.
ಈ ಹಿನ್ನಲೆಯಲ್ಲಿ 15 ಪೊಲೀಸರನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದ್ದು ಕಳ್ಳನನ್ನು ಕರದೊಯ್ಯಲಾಗಿರುವ ಪೊಲೀಸ್ ಠಾಣೆಗೆ ಸ್ಯಾನಿಟೈಸರ್ ಸಿಂಪಡಿಸಲಾಗಿದೆ. ಹಾಗೆಯೇ ಆತನಿಗೆ ಥಳಿಸಿದ ಜನರನ್ನು ಕೂಡಾ ಗುರುತಿಸಿ ಕ್ವಾರಂಟೈನ್ಗೆ ಒಳಪಡಿಸುವ ಕಾರ್ಯ ನಡೆಸಲಾಗುತ್ತಿದ್ದು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಿಗೂ ಭೀತಿ ಉಂಟಾಗಿದೆ.
ಈ ಹಿಂದೆ ಕೋಲಾರದ ಕೆಜಿಎಫ್ ಮಾರಿಕುಪ್ಪಂನಲ್ಲಿರುವ ಗಣಿಗೆ ಇಳಿದು ಕಳ್ಳತನಕ್ಕೆ ಯತ್ನಿಸಿದ್ದ ಐವರ ಪೈಕಿ ಗಣಿಯಲ್ಲೇ ಸಿಲುಕಿ ಮೂವರು ಮೃತಪಟ್ಟಿದ್ದು ಉಳಿದಿಬ್ಬರಲ್ಲಿ ಒರ್ವನಲ್ಲಿ ಸೋಂಕು ದೃಢಪಟ್ಟಿತ್ತು.