ಚಿಕ್ಕಬಳ್ಳಾಪುರ, ಮೇ 20 (Daijiworld News/MB) : "ಕೊರೊನಾ ಸೋಂಕಿನ ಈ ಸಂಕಷ್ಟದ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿರುವ ಪ್ಯಾಕೇಜ್ಗೆ ದೇಶದೆಲ್ಲೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿರುವ ಈ ಸಂದರ್ಭದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಟೀಕೆ ಮಾಡುವುದರಲ್ಲೇ ಮಗ್ನರಾಗಿದ್ದಾರೆ. ಅವರು ಟೀಕೆ ಮಾಡುವುದರಲ್ಲಿಯೇ ತೃಪ್ತಿ ಕಾಣಲಿ" ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯ ಮಾಡಿದ್ದಾರೆ.
ಮಂಗಳವಾರ ತಾಲ್ಲೂಕಿನ ಗಾವಿಗಾನಹಳ್ಳಿಯಲ್ಲಿ ಅಂತರ್ಜಲ ಚೇತನ ಯೋಜನೆಗೆ ಚಾಲನೆ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಇಡೀ ವಿಶ್ವವೇ ಕೊರೊನಾ ವಿರುದ್ಧ ಹೋರಾಟದಲ್ಲಿ ಯಶಸ್ವಿಯಾದ ನಾಯಕ ಎಂದು ನಮ್ಮ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳುತ್ತಿರುವ ಈ ಸಂದರ್ಭದಲ್ಲಿ ಕುಮಾರಸ್ವಾಮಿ ಟೀಕೆ ಮಾಡುತ್ತಾರೆ. ಮೋದಿ ಅವರ ಕೆಲಸಕ್ಕೆ ರಾಜ್ಯದಲ್ಲೂ ಸಹಾಯ ಮಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರನ್ನು ಕರ್ನಾಟಕದ ಮೋದಿ ಕರೆಯಲು ಇಷ್ಟಪಡುವೆ" ಎಂದು ಹೇಳಿದರು.
"ಕುಮಾರಸ್ವಾಮಿ ಅವರು ಮಾಡುವ ಟೀಕೆಯನ್ನೇ ನಾವು ಮಾರ್ಗದರ್ಶನ ಎಂದು ಭಾವಿಸಿ ಇನ್ನಷ್ಟು ಒಳ್ಳೆಯ ಕಾರ್ಯಗಳನ್ನು ಮಾಡುತ್ತೇವೆ. ಟೀಕೆ ಮಾಡುವುದು ಸರಿಯೋ ತಪ್ಪೋ ಎಂಬುದು ಜನರೇ ನಿರ್ಧರಿಸಲಿ. ಪ್ರಧಾನಮಂತ್ರಿ ಮಾಡಿದೆಲ್ಲವನ್ನು ಟೀಕೆ ಮಾಡುವುದೇ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರ ಕರ್ತವ್ಯ ಎಂದು ಹೇಳಿದ್ದಾರೆ.