ನವದೆಹಲಿ, 20 (Daijiworld News/MSP): ಒಂದೆಡೆ ದೇಶದಾದ್ಯಂತ ಜಾರಿಯಲ್ಲಿದ್ದ ಲಾಕ್'ಡೌನ್ ಸಡಿಲಿಕೆ, ಇನ್ನೊಂದೆಡೆ ದೇಶದಲ್ಲಿ ಕೊರೊನಾ ಅಟ್ಟಹಾಸ ಆರಂಭವಾಗಿದೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಬರೋಬ್ಬರಿ ದಾಖಲೆಯ 5,611 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,06,750ಕ್ಕೆ ಏರಿಕೆಯಾಗಿದೆ.
ಮಹಾಮಾರಿ ವೈರಸ್'ಗೆ ನಿನ್ನೆ ಒಂದೇ ದಿನ 140 ಮಂದಿ ಸಾವನ್ನಪ್ಪಿದ್ದು, ಕೋವಿಡ್ 19 ವೈರಸ್ ನಿಂದ ಸಾವನ್ನಪ್ಪಿದವರ ಸಂಖ್ಯೆ 3,300ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಸಚಿವಾಲಯ ಹೇಳಿದೆ.
ಈ ಮಧ್ಯೆ ದೇಶದಾದ್ಯಂತ 42,298 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಕೋವಿಡ್ 19 ವೈರಸ್ ತಡೆಗಟ್ಟಲು ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಲಾಗಿತ್ತು. ಇದೀಗ ಮೂರು ಹಂತ ಮುಗಿದು ನಾಲ್ಕನೇ ಹಂತದಲ್ಲಿ ಲಾಕ್ ಡೌನ್ ನಿರ್ಬಂಧ ಸಡಿಲಿಕೆ ಮಾಡಿ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಅವಕಾಶ ಮಾಡಿಕೊಡಲಾಗಿದೆ. ಈ ನಡುವೆ ಅಷ್ಟೇ ವೇಗವಾಗಿ ಭಾರತದಲ್ಲಿ ಕೊರೊನಾ ಹರಡುತ್ತಿದೆ.
ಹಾಟ್ ಸ್ಪಾಟ್ ಮಹಾರಾಷ್ಟ್ರದಲ್ಲಿ ಮತ್ತೆ 2,100 ಹೊಸ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 37,158ಕ್ಕೆ ಏರಿಕೆಯಾಗಿದೆ.