ಉತ್ತರಪ್ರದೇಶ, ಮೇ 20 (Daijiworld News/MB) : ತರಕಾರಿ ಹಾಗೂ ಹಲಸಿನ ಹಣ್ಣು ತುಂಬಿ ಮಾರುಕಟ್ಟೆಗೆ ಸಂಚರಿಸುತ್ತಿದ್ದ ಟ್ರಕ್ಗೆ ಮತ್ತೊಂದು ಟ್ರಕ್ ಡಿಕ್ಕಿ ಹೊಡೆದ ಪರಿಣಾಮ 6 ಮಂದಿ ರೈತರು ದಾರುಣವಾಗಿ ಸಾವನ್ನಪ್ಪಿದ್ದು ಓರ್ವ ವ್ಯಕ್ತಿಗೆ ಗಾಯವಾಗಿರುವ ಘಟನೆ ಇಲ್ಲಿನ ಇಟಾವ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 2ರ ಫ್ರೆಂಡ್ಸ್ ಕಾಲೋನಿ ಸಮೀಪ ಬುಧವಾರ ಬೆಳಗಿನಜಾವ ಸಂಭವಿಸಿದೆ.
ಅಪಘಾತವಾದ ವಿಷಯ ತಿಳಿದ ಕೂಡಲೆ ಎಸ್ಎಸ್ಪಿ ಆಕಾಶ್ ತೋಮರ್ ಸ್ಥಳಕ್ಕೆ ಧಾವಿಸಿದ್ದು ಎಲ್ಲರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಕೆಲವರು ಸ್ಥಳದಲ್ಲಿಯೇ ಸಾವನ್ನಪ್ಪಿದರೆ ಇನ್ನು ಕೆಲವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ತೀವ್ರ ಅಪಘಾತದಿಂದಾಗಿ ನಜ್ಜುಗುಜ್ಜಾಗಿರುವ ಟ್ರಕ್ಗಳನ್ನು ಪೊಲೀಸ್ ಠಾಣೆಗೆ ಸಾಗಿಸಲಾಗಿದ್ದು ಮೃತ ರೈತರ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಎಸ್ಎಸ್ಪಿ ಅಕಾಶ್ ತೋಮರ್ ತಿಳಿಸಿದ್ದಾರೆ.
ಇನ್ನು ರೈತರ ಸಾವಿಗೆ ಸಂತಾಪ ಸೂಚಿಸಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೃತರ ಕುಟುಂಬಕ್ಕೆ 2 ಲಕ್ಷ ಹಾಗೂ ಗಾಯಗೊಂಡವರಿಗೆ 50 ಸಾವಿರ ಪರಿಹಾರ ಘೋಷಿಸಿದ್ದಾರೆ.