ನವದೆಹಲಿ, ಮೇ 20 (DaijiworldNews/PY) : ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾಗಿ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು ಮೇ 22ರಂದು ಅಧಿಕಾರ ಸ್ವೀಕರಿಸಲಿದ್ದಾರೆ.
ಜಪಾನ್ ನ ಡಾ. ಹಿರೊಕಿ ನಕಟನಿ ಅವರು ಪ್ರಸ್ತುತ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು. ಡಾ.ಹರ್ಷವರ್ಧನ್ ಅವರು ಹಿರೊಕಿ ಅವರ ಸ್ಥಾನವನ್ನು ವಹಿಸಿಕೊಳ್ಳಲಿದ್ದಾರೆ. ಮಂಗಳವಾರದ ಸಭೆಯಲ್ಲಿ ಭಾರತದ ಪ್ರತಿನಿಧಿಯನ್ನು ಕಾರ್ಯಕಾರಿ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಬೇಕೆಂಬ ಪ್ರಸ್ತಾವನೆಗೆ 194 ದೇಶಗಳು ಸಹಿ ಮಾಡಿವೆ. ಈ ಕಾರ್ಯಕಾರಿ ಮಂಡಳಿಯು 34 ಮಂದಿ ಸದಸ್ಯರನ್ನು ಹೊಂದಿದೆ.
ಕಳೆದ ವರ್ಷ ವಿಶ್ವ ಆರೋಗ್ಯ ಸಂಸ್ಥೆಯ ದಕ್ಷಿಣ ಪೂರ್ವ ಏಷ್ಯಾ ಗ್ರೂಪ್ ಮೇ 22 ರಿಂದ 3 ವರ್ಷಗಳವರೆಗೆ ಭಾರತದ ಪ್ರತಿನಿಧಿಯನ್ನು ನಾಮಾಂಕಿತ ಮಾಡುವುದಕ್ಕೆಅವಿರೋಧವಾಗಿ ನಿರ್ಧರಿಸಿತ್ತು. ಈ ಹುದ್ದೆ ಪೂರ್ಣ ಪ್ರಮಾಣದ ಹುದ್ದೆಯಲ್ಲ, ಕಾರ್ಯಕಾರಿ ಮಂಡಲೀಯ ಸಭೆಗಳಲ್ಲಿ ಅಧ್ಯಕ್ಷರಾದವರು ಪಾಲ್ಗೊಳ್ಳಲೇಬೇಕಾಗುತ್ತದೆ.
ಒಂದು ವರ್ಷದವರೆಗೆ ಸ್ಥಳೀಯ ಗುಂಪಿನ ರೊಟೇಶನ್ ಮಾದರಿಯಲ್ಲಿ ಅಧ್ಯಕ್ಷರನ್ನು ನಾಮಾಂಕಿತ ಮಾಡಲಾಗುತ್ತದೆ. ಬೇರೆ ರಾಷ್ಟ್ರಗಳಿಗೆ ಇನ್ನುಳಿದ ಎರಡು ವರ್ಷಗಳ ಕಾಲ ಅವಕಾಶ ಕಲ್ಪಿಸಲಾಗುತ್ತದ ಎಂದು ಅಧಿಕಾರಿ ಹೇಳಿದ್ದಾರೆ.