ಜಮ್ಮು, ಮೇ 20 (Daijiworld News/MB) : ಆರ್ಎಸ್ಎಸ್ ಕಾರ್ಯಕರ್ತ ಮತ್ತು ಅವರ ಖಾಸಗಿ ಭದ್ರತಾ ಅಧಿಕಾರಿಯನ್ನು ಹತ್ಯೆ ಮಾಡಿದ್ದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರನನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಮಂಗಳವಾರ ರಾತ್ರಿ ಜಿಲ್ಲೆಯ ಹಂಜಾಲಾ ಪ್ರದೇಶದಲ್ಲಿ ಬಂಧನ ಮಾಡಿದೆ.
ಬಂಧಿತ ಉಗ್ರನನ್ನು ರುಸ್ತುಂ ಅಲಿ ಎಂದು ಗುರುತಿಸಲಾಗಿದೆ.
ಆರ್ಎಸ್ಎಸ್ನ ಹಿರಿಯ ಕಾರ್ಯಕರ್ತ ಚಂದ್ರಕಾಂತ ಶರ್ಮಾ ಮತ್ತು ಅವರ ಖಾಸಗಿ ಭದ್ರತಾ ಅಧಿಕಾರಿಯನ್ನು 2019ರ ಏಪ್ರಿಲ್ನಲ್ಲಿ ಹತ್ಯೆ ಮಾಡಲಾಗಿದ್ದು ಈ ಮೊದಲು 2018ರಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಿಲ್ ಪವಾರ್ ಅವರ ಹತ್ಯೆ ನಡೆದಿತ್ತು. ಈ ಎರಡೂ ಹತ್ಯೆಗಳನ್ನು ಖಂಡನೆ ಮಾಡಿ ಜಮ್ಮುವಿನ ಕಿಶ್ತ್ವಾರ್ ಪ್ರದೇಶದಲ್ಲಿ ಪ್ರತಿಭಟನೆಗಳು ನಡೆದಿದ್ದವು.
ಜಮ್ಮು ವಲಯದಲ್ಲಿ ಬಿಜೆಪಿ ಮತ್ತು ಆರ್ಎಸ್ಎಸ್ ನಾಯಕರ ಹತ್ಯೆ ಮಾಡುದ ಆರೋಪದಲ್ಲಿ ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಪೊಲೀಸರು ನಾಸಿ ಅಹಮದ್ ಶೇಖ್, ನಿಶಾದ್ ಅಹಮದ್ ಮತ್ತು ಆಜಾದ್ ಹುಸೇನ್ನನ್ನು ಬಂಧನ ಮಾಡಿದ್ದು ಇದೀಗ ಆರ್ಎಸ್ಎಸ್ ಕಾರ್ಯಕರ್ತ ಮತ್ತು ಅವರ ಖಾಸಗಿ ಭದ್ರತಾ ಅಧಿಕಾರಿಯನ್ನು ಹತ್ಯೆ ಮಾಡಿದ ಆರೋಪದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ರುಸ್ತುಂ ಅಲಿಯನ್ನು ಬಂಧನ ಮಾಡಿದ್ದಾರೆ.
ಇನ್ನು ಕಿಶ್ತ್ವಾರ್ ಪ್ರದೇಶದಲ್ಲಿ ಉಗ್ರಗಾಮಿ ಚಟುವಟಿಕೆ ಮತ್ತೆ ಆರಂಭ ಮಾಡುವ ನಿಟ್ಟಿನಲ್ಲಿ ಈ ಹತ್ಯೆಗಳನ್ನು ನಡೆಸಲಾಗುತ್ತಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.