ಬೆಂಗಳೂರು, ಮೇ 20 (Daijiworld News/MSP): ಕೊರೊನಾ ಮಾಹಾಮಾರಿ ಹಾಗೂ ಅದರ ನಿಯಂತ್ರಣಕ್ಕೆ ಹೇರಿರುವ ಲಾಕ್ಡೌನ್ ಜನಸಾಮಾನ್ಯರನ್ನು ಸಂದಿಗ್ಧತೆಗೆ ಸಿಲುಕಿಸಿದ್ದು, ಮತ್ತೆ ಸಾಮಾನ್ಯ ಪರಿಸ್ಥಿತಿಗೆ ಬರಲು ಪರದಾಡುವಂತಾಗಿದೆ.
ದೇಶದೆಲ್ಲೆಡೆ ಈಗಾಗಲೇ ಮಾರಣಾಂತಿಕ ಸೋಂಕಿಗೆ ಮೂರು ಸಾವಿರಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಮಂದಿ ಸೋಂಕು ಪೀಡಿತರಾಗಿದ್ದಾರೆ.
ಲಾಕ್ ಡೌನ್ ಜಾರಿಗೊಳಿಸಿದ್ದ ಪರಿಣಾಮ ಸಾರ್ವಜನಿಕರ ಬದುಕು ಹೈರಾಣಾಗಿದ್ದು, ಬಡವರು ಹಾಗೂ ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಜೀವನ ಸಾಗಿಸಲು ಹಾಗೂ ಒಂದು ಹೊತ್ತಿನ ಊಟಕ್ಕೂ ಸಂಕಷ್ಟ ಎದುರಿಸುತ್ತಿದ್ದಾರೆ.
ವಲಸೆ ಕಾರ್ಮಿಕ, ಬಡ ಜನರ ಹಾಗೂ ಸಂಕಷ್ಟ ಪೀಡಿತ ಜನತೆಯ ನೆರವಿಗೆ ಜನಪ್ರತಿನಿಧಿಗಳು, ಸಂಘ - ಸಂಸ್ಥೆಗಳು ಧಾವಿಸಿದ್ದು, ಆಹಾರದ ಕಿಟ್ಗಳನ್ನು ಎಲ್ಲೆಡೆ ವಿತರಿಸಲಾಗುತ್ತಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಸ್ಪೀಕರ್ ರಮೇಶ್ ಕುಮಾರ್, "ಬೇರೆಯವರಿಗೆ ಆಹಾರದ ಕಿಟ್ ವಿತರಿಸುವಷ್ಟು ಶಕ್ತಿ ನನಗಿಲ್ಲ, ಯಾರಾದರೂ ಆಹಾರ ಕಿಟ್ ನೀಡಿದರೆ ನಾನೂ ಕೂಡಾ ತೆಗೆದುಕೊಳ್ಳುತ್ತೇನೆ" ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.