ಬೆಂಗಳೂರು, ಮೇ 20 (Daijiworld News/MB) : ಜುಲೈ 30 ಹಾಗೂ 31ರಂದು ನಡೆಯಲಿರುವ 2020ನೇ ಸಾಲಿನ ಸಿಇಟಿ ಪರೀಕ್ಷೆಗಳಿಗಾಗಿ ಕೊರೊನಾ ಕಾರಣದಿಂದಾಗಿ 75 ಹೊಸ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಈಗಾಗಲೇ ಕೊರೊನಾ ಲಾಕ್ಡೌನ್ ಕಾರಣದಿಂದಾಗಿ ವಿದ್ಯಾರ್ಥಿಗಳಿಗೆ ಸಮೀಪ ಇರುವ ಪರೀಕ್ಷಾ ಕೇಂದ್ರಗಳಲ್ಲೇ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗಿದ್ದು ವಿದ್ಯಾರ್ಥಿಗಳು ಈಗಾಗಲೇ ನಮೂದಿಸಿರುವ ಪರೀಕ್ಷಾ ಕೇಂದ್ರಗಳನ್ನು ಅಗತ್ಯವಿದ್ದಲ್ಲಿ ಬದಲಾಯಿಸಬಹುದು. ಹೊಸದಾಗಿ ಸೇರ್ಪಡೆಗೊಂಡಿರುವ 75 ಪರೀಕ್ಷಾ ಕೇಂದ್ರಗಳ ಮಾಹಿತಿಯನ್ನು ಪ್ರಾಧಿಕಾರದ ವೆಬ್ ಸೈಟ್ನಲ್ಲಿ ಲಭ್ಯವಿದದ್ದು ಪರೀಕ್ಷಾ ಕೇಂದ್ರಗಳನ್ನು ಬದಲಾಯಿಸಿಕೊಳ್ಳಲು ಹಾಗೂ ಅರ್ಜಿಗಳಲ್ಲಿನ ಮಾಹಿತಿಯನ್ನು ಅರ್ಹತೆಗೆ ಅನುಗುಣವಾಗಿ ಮಾರ್ಪಡಿಸಲು ಮೇ 20ರ ಸಾಯಂಕಾಲ 6.00ರಿಂದ ಮೇ 22ರ ಸಾಯಂಕಾಲ 6 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ.
ಈ ಬಗ್ಗೆ ಪ್ರಕಟನೆಯಲ್ಲಿ ಮಾಹಿತಿ ನೀಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ವಿದ್ಯಾರ್ಥಿಗಳು ತಮ್ಮ ಆದ್ಯತೆಯ ಆಧಾರದಲ್ಲಿ ತಾವು ಹಾಜರಾಗಬಯಸುವ ಪರೀಕ್ಷಾ ಕೇಂದ್ರಗಳಿಗೆ ಮೂರು ಆಯ್ಕೆಗಳನ್ನು ನಮೂದಿಸಬೇಕು. ಆ ಬಳಿಕ ಆದ್ಯತೆ ಹಾಗೂ ಪರೀಕ್ಷಾ ಕೇಂದ್ರಗಳ ಲಭ್ಯತೆಯ ಆಧಾರದಲ್ಲಿ ಪರೀಕ್ಷಾ ಕೇಂದ್ರಗಳನ್ನು ಹಂಚಿಕೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.