ಬೆಂಗಳೂರು, ಮೇ 20 (Daijiworld News/MB) : ಬೆಂಗಳೂರು ನಗರದ ಪೂರ್ವ ಭಾಗದ ಹಲವು ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ 1.20 ರ ಸುಮಾರಿಗೆ ಏಕಾಏಕಿ ಭಾರೀ ಸದ್ದು ಕೇಳಿಸಿದ್ದು ಜನರಲ್ಲಿ ಇದೀಗ ಆತಂಕ ಮನೆ ಮಾಡಿದೆ.
ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಕಲ್ಯಾಣ ನಗರ, ಜಯನಗರ, ಜೆಪಿ ನಗರ, ಕೋರಮಂಗಲ, ಎಂ.ಜಿ ರಸ್ತೆ, ಮಾರತ್ತಹಳ್ಳಿ, ವೈಟ್ಫೀಲ್ಡ್, ಸರ್ಜಾಪುರ, ಎಲೆಕ್ಟ್ರೋನಿಕ್ ಸಿಟಿ, ಹೆಬ್ಬಗೋಡಿವರೆಗೂ ಈ ಶಬ್ದ ಕೇಳಿಸಿದೆ. ಸುಮಾರು ಬೆಂಗಳೂರಿಗೆ ಈ ಶಬ್ದ ಕೇಳಿಸಿದೆ ಎಂದು ವರದಿಯಾಗಿದೆ.
ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ವೈಟ್ಫೀಲ್ಡ್ ವಿಭಾಗದ ಡಿಸಿಪಿ ಅನುಚೇತ್, ಈ ಶಬ್ಧ ಎಲ್ಲಿಂದ ಬಂದಿದೆ, ಹೇಗೆ ಬಂದಿದೆ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಯಾವುದೇ ಅನಾಹುತ ಸಂಭವಿಸಿದ ಬಗ್ಗೆ ಈವರೆಗೆ ತಿಳಿದು ಬಂದಿಲ್ಲ. ಎಚ್ಎಎಲ್ ಮತ್ತು ಐಎಎಫ್ ಅಧಿಕಾರಿಗಳನ್ನು ಸಂಪರ್ಕಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯ ವಿಪತ್ತು ನಿರ್ವಹಣಾ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ ಅವರು, ರಿಕ್ಟರ್ ಮಾಪಕದಲ್ಲಿ ಯಾವುದೇ ಮಾಹಿತಿ ದಾಖಲಾಗಿಲ್ಲ. ಹೀಗಾಗಿ, ಇದು ಭೂಕಂಪದ ಶಬ್ದವಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇನ್ನು ಈ ಶಬ್ಧದ ಬಗ್ಗೆ ಜನರು ಹಲವು ವಿವರಣೆಗಳನ್ನು ನೀಡುತ್ತಿದ್ದು, ಕೆಲವರು ಬಾಂಬ್ ಸ್ಪೋಟ ಸಂಭವಿಸಿದ ಶಬ್ದದಂತಿತ್ತು ಎಂದು ಹೇಳಿದರೆ ಇನ್ನೂ ಕೆಲವರು ಗ್ಯಾಸ್ ಸಿಲಿಂಡರ್ ಸ್ಫೋಟದಂತೆ ಆ ಶಬ್ಧ ಕೇಳಿಸಿದೆ ಎಂದು ಹೇಳಿದ್ದಾರೆ. ಹಾಗೆಯೇ ಈ ಶಬ್ಧ ಎತ್ತರದಲ್ಲಿ ಕೇಳಿಸಿದ್ದು ಜೆಟ್, ವಿಮಾನ ಹಾರಾಟದ ವೇಳೆ ಈ ರೀತಿಯ ಶಬ್ಧ ಉಂಟಾಗುವ ಸಾಧ್ಯತೆಗಳಿರುತ್ತದೆ ಎಂದು ಹೇಳಲಾಗಿದ್ದು ಈ ಬಗ್ಗೆ ದೃಢಪಟ್ಟಿಲ್ಲ.