ಬೆಂಗಳೂರು, ಮೇ 20 (DaijiworldNews/PY) : ವಲಸೆ ಕಾರ್ಮಿಕರಿಗೆ ಉದ್ಯೋಗ ಖಾತರಿ ಯೋಜನೆ ಅಡಿ ಉದ್ಯೋಗ ಕಲ್ಪಿಸುವಂತೆ ಸಿಎಂ ಬಿಎಸ್ವೈ ಅವರು ಹೇಳಿದ್ದಾರೆ.
ಬುಧವಾರ ಮುಖ್ಯಮಂತ್ರಿ ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, 2020-21ನೇ ಸಾಲಿನಲ್ಲಿ ಉದ್ಯೋಗ ಖಾತರಿ ಯೋಜನೆಯಡಿ 13 ಕೋಟಿ ಮಾನವ ದಿನಗಳ ಸೃಜನೆಯ ಗುರಿ ಹಾಗೂ ₹6315.79 ಕೋಟಿ ಅನುದಾನ ನಿಗದಿ ಪಡಿಸಲಾಗಿದೆ. ಅಲ್ಲದೇ, ಉದ್ಯೋಗ ಖಾತರಿ ಯೋಜನೆಗೆ ₹40 ಸಾವಿರ ಕೋಟಿ ಹೆಚ್ಚುವರಿ ಅನುದಾನವನ್ನು ಕೇಂದ್ರ ಸರ್ಕಾರವು ನಿಗದಿ ಪಡಿಸಿದ್ದರಿಂದ ವಲಸೆ ಕಾರ್ಮಿಕರಿಗೆ ಉದ್ಯೋಗ ದೊರೆಯುವಂತೆ ಮತ್ತು ನಿಗದಿತ ಅವಧಿಯಲ್ಲಿ ವೇತನ ಪಾವತಿ ಮಾಡಲು ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದರು.
ಪ್ರತಿ ಪಂಚಾಯತ್ ವ್ಯಾಪ್ತಿಯಲ್ಲಿ ಕೊರೊನಾ ನಿಯಂತ್ರಣ ಮಾಡಲು ಟಾಸ್ಕ್ ಫೋರ್ಸ್ ರಚನೆ ಮಾಡಿ ಜನ ಜಾಗೃತಿ ಮೂಡಿಸುವುದು, ಲಾಕ್ಡೌನ್ ಸಂದರ್ಭ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ವಿತರಣೆ ಮಾಡುವುದು, ಮನೆ ಮನೆಗೆ ಭೇಟಿ ಮಾಡಿ ಹೋಂ ಕ್ವಾರಂಟೈನ್ ತಪಾಸಣೆ ಮಾಡುವುದು, ಪ್ರತಿದಿನ ಮಾಹಿತಿ ಸಂಗ್ರಹಿಸುವುದು ಸಾಂಸ್ಥಿಕ ಕ್ವಾರಂಟೈನ್ ನಿರ್ವಹಣೆ ಮೇಲ್ವಿಚಾರಣೆ ನಡೆಸುತ್ತಿದೆ. ಇದರೊಂದಿಗೆ ಸ್ವಸಹಾಯ ಸಂಘಗಳೂ ಮಾಸ್ಕ್ ತಯಾರಿಸಿ ವಿತರಣೆ ಮಾಡುತ್ತಿದೆ. ಗ್ರಾಮೀಣ ಪ್ರದೇಶದ ಜನರಿಗೆ ಇದರಿಂದಾಗಿ ಆತ್ಮವಿಶ್ವಾಸ ಮೂಡಿಸಲು ಸಾಧ್ಯವಾಗಿರುವ ವಿಚಾರವಾಗಿ ಸಿಎಂ ಅವರು ಶ್ಲಾಘಿಸಿದ್ದಾರೆ.
ಬೇಸಿಗೆ ಸಂದರ್ಭ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರ ವಹಿಸಲು ತಿಳಿಸಿದರು. ಬೇಸಿಗೆಯ ಸಂದರ್ಭ ನೀರಿನ ಸಮಸ್ಯೆ ಇರುವ 14 ಜಿಲ್ಲೆಗಳಲ್ಲಿ 659 ಗ್ರಾಮಗಳಲ್ಲಿ 389 ಟ್ಯಾಂಕರ್ ಹಾಗೂ 706 ಖಾಸಗಿ ಬೋರ್ವೆಲ್ಗಳಿಂದ ನೀರು ಪೂರೈಕೆಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಯೋಜನೆ, ರಾಜ್ಯ ಸರ್ಕಾರದ ಜಲಧಾರೆ ಯೋಜನೆ ಹಾಗೂ ಶುದ್ದ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಇತ್ಯಾದಿ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಯಿತು.