ಬೆಂಗಳೂರು, ಮೇ 20 (Daijiworld News/MSP): "ಮುಸ್ಲಿಮರ ಹಣವನ್ನು ಕೊರೊನಾ ನಿಯಂತ್ರಣಕ್ಕೆ ಬಳಸುವುದು ಬೇಡ, ಇದು ಮುಸ್ಲಿಮರಿಗಷ್ಟೇ ಸೀಮಿತವಾಗಿರಲಿ" ಎಂಬ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಹೇಳಿಕೆಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಇನ್ನೂ ಜಿನ್ನಾ ಮಾನಸಿಕತೆಯಿಂದ ಹೊರ ಬಂದಿಲ್ಲ ಎಂದು ಸಚಿವ ಸಿಟಿ ರವಿ ಕಿಡಿಕಾರಿದ್ದಾರೆ.
ಯಾವುದೇ ವಿಚಾರದಲ್ಲೂ ತಾರತಮ್ಯ ಮಾಡಲು ಸಂವಿಧಾನದಲ್ಲಿ ಅವಕಾಶವಿಲ್ಲ. ಜಮೀರ್ ಅಹಮದ್ ನೀಡಿದ ಹೇಳಿಕೆ ಸೋಕಾಲ್ಡ್ ಸೆಕ್ಯೂಲರ್ಸ್ ನೀತಿಗೆ ವಿರುದ್ಧವಾಗಿದೆ. ವಕ್ಫ್ ಬೋರ್ಡ್ ಹಣವನ್ನು ರಾಜ್ಯ ಸರ್ಕಾರ ತೆಗೆದುಕೊಳ್ಳಬಾರದು ಎಂಬ ಹೇಳಿಕೆ ಸಂವಿಧಾನ ವಿರೋಧಿ. ವಕ್ಫ್ ಬೋರ್ಡ್ ಸರ್ಕಾರಕ್ಕಿಂತಲೂ ದೊಡ್ಡದಲ್ಲ. ಕೊರೊನಾ ಸಾಂಕ್ರಾಮಿಕ ಪಿಡುಗಿನ ಈ ವೇಳೆಯಲ್ಲಿ ಜಮೀರ್ ಅಹ್ಮದ್ ಖಾನ್ ಮಾನವೀಯತೆಗಿಂತ ಜಾತಿಯನ್ನು ಪ್ರತಿಬಿಂಬಿಸುವ ಹೇಳಿಕೆ ನೀಡಿದ್ದಾರೆ. ವಕ್ಫ್ ಹಣವನ್ನು ಹೇಗೆ ಖರ್ಚು ಮಾಡಬೇಕು ಎಂದು ಹೇಳುವ ಅಧಿಕಾರ ಜಮೀರ್ ಗೆ ಇಲ್ಲವೆಂದು ಕಿಡಿ ಕಾರಿದ್ದಾರೆ.
ಕೊರೋನಾ ವಿರುದ್ಧ ಹೋರಾಟಕ್ಕೆ ಸರ್ಕಾರಕ್ಕೆ ದೇಣಿಗೆ ನೀಡಬಾರದು ಎಂದು ಹೇಳಿರುವುದು ಖಂಡನೀಯ. ವಕ್ಫ್ ಬೋರ್ಡ್ ಗೆ ಕೊಡುವುದು ಸಾರ್ವಜನಿಕರ ದುಡ್ಡಾಗಿರುತ್ತದೆ. ಅವರು ಇನ್ನೂ ಕೂಡಾ ಜಿನ್ನಾ ಮಾನಸಿಕತೆಯಿಂದ ಹೊರ ಬಂದಿಲ್ಲ. ವಕ್ಫ್ ಬೋರ್ಡ್ ಗೆ ಜಕಾತ್ ಕೊಟ್ಟು ಡೆಪಾಸಿಟ್ ಮಾಡಿರುವ ಹಣ ಅಲ್ಲ. ಜಮೀರ್ ಅಹ್ಮದ್ ಅವರು ಕೊಡುವ ಜಕಾತ್ ಹಣವನ್ನು ನಾವು ಕೇಳುವುದಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.