ಬೆಂಗಳೂರು, ಮೇ 20 (Daijiworld News/MB) : 'ಈವರೆಗೂ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಬೆಂಬಲಿಸಿದ್ದು ಇನ್ನು ಹೆಚ್ಚು ದಿನಗಳ ಕಾಲ ಅನ್ಯಾಯ ಸಹಿಸಲು ಸಾಧ್ಯವಿಲ್ಲ' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಬುಧವಾರ ಎಪಿಎಂಸಿ, ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ಹಾಗೂ ಗ್ರಾಮ ಪಂಚಾಯತಿಗಳಿಗೆ ಆಡಳಿತ ಸಮಿತಿ ರಚಿಸುವ ಸರ್ಕಾರದ ನಿರ್ಧಾರಗಳ ವಿರುದ್ಧ ಕೆಪಿಸಿಸಿ ವತಿಯಿಂದ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
'ದೇಶದ ಜನರಿಗೆ ಸುಳ್ಳು ಹೇಳಿ ಟೋಪಿ ಹಾಕುವ ಕಾರ್ಯವನ್ನು ಪ್ರಧಾನಿ ಮೋದಿ ಮಾಡುತ್ತಿದ್ದಾರೆ. ನಾವು ಅನೇಕ ಬಾರಿ ಸಲಹೆ ಸೂಚನೆಗಳನ್ನು ನೀಡಿದ್ದು ಯಾವುದನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಕಾರ್ಮಿಕರ ಕಷ್ಟಕ್ಕೆ ಸ್ಪಂಧಿಸದ ಕಾರಣ ಅವರೆಲ್ಲಾ ಊರು ಬಿಡುತ್ತಿದ್ದು ಇದೀಗ ಬೀದಿಯಲ್ಲಿದ್ದಾರೆ. ನೇಕಾರರು, ಕುಂಬಾರರು, ಮಡಿವಾಳರಿಗೆ ಎಲ್ಲರಿಗೂ ಪರಿಹಾರ ಕೊಡಿ ಎಂದು ನಾವು ಹೇಳಿದ್ದೆವು. ಈ ಸರ್ಕಾರ ಏನು ಮಾಡಲಿಲ್ಲ. ರೈತರಿಗೆ, ಕಾರ್ಮಿಕರಿಗೆ, ಮಹಿಳೆಯರಿಗೆ ಆಗುತ್ತಿರುವ ಅನ್ಯಾಯ ಸಹಿಸಲು ಸಾಧ್ಯವಿಲ್ಲ. ಇದರ ವಿರುದ್ಧವಾಗಿ ಕಾಂಗ್ರೆಸ್ ಉಗ್ರ ಸ್ವರೂಪದ ಹೋರಾಟಕ್ಕೆ ಮುಂದಾಗಲಿದೆ' ಎಂದು ಎಚ್ಚರಿಕೆ ನೀಡಿದ್ದಾರೆ.
'ಯಡಿಯೂರಪ್ಪನವರು ರೈತರು, ಕಾರ್ಮಿಕರನ್ನು ಕಾಪಾಡುತ್ತೇವೆ ಎಂದು ಹೇಳಿದ್ದು ಈಗ ವಿಫಲವಾಗಿದ್ದಾರೆ. ರಾಜ್ಯ ಸರ್ಕಾರ ಕೊರೊನಾ ತಡೆಗಟ್ಟುವಲ್ಲೂ ವಿಫಲವಾಗಿದೆ. ಇಷ್ಟು ದಿನ ತಬ್ಲೀಘಿ ಸದಸ್ಯರಿಂದ ಕೊರೊನಾ ಹರಡಿದೆ ಎಂದು ಹೇಳುತ್ತಿದ್ದ ಸರ್ಕಾರ ಈಗ ಏನು ಹೇಳುತ್ತದೆ ?' ಎಂದು ಪ್ರಶ್ನಿಸಿದ್ದಾರೆ.
'ನರೇಂದ್ರ ಮೋದಿ ಅವರ 20 ಲಕ್ಷ ಕೋಟಿ ಪ್ಯಾಕೇಜ್ ಬೋಗಸ್ ಪ್ಯಾಕೇಜ್ ಎಂದು ನಮ್ಮ ನಾಯಕ ಚಿದಂಬರಂ ಸರಿಯಾಗಿ ಹೇಳಿದ್ದಾರೆ. 20 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ನಲ್ಲಿ ಜೆಡಿಪಿಯ ಶೇ.1 ರಷ್ಟು ಕೇಂದ್ರ ಸರ್ಕಾರ ಕೊಡುತ್ತಿಲ್ಲ. ಇದು ಈ ಮೊದಲು ಅವರು ಹೇಳಿರುವ ಸುಳ್ಳುಗಳ ಮುಂದುವರಿದ ಭಾಗ. ರೈತರಿಗೆ ಆದಾಯ ದುಪ್ಪಟ್ಟು, ಕಪ್ಪು ಹಣ ತರುವುದು ಎಂಬ ಹಸಿ ಸುಳ್ಳಿನ ಜೊತೆಗೆ ಇದೊಂದು ಹೊಸ ಸುಳ್ಳು ಎಂದು ಟೀಕೆ ಮಾಡಿದ ಅವರು ನರೇಂದ್ರ ಮೋದಿ ಮಹಾನ್ ಸುಳ್ಳುಗಾರ. ಚಪ್ಪಾಳೆ ತಟ್ಟಿ, ಘಂಟೆ ಬಾರಿಸಿ, ದೀಪ ಹಚ್ಚಿ ಎನ್ನುತ್ತಾರೆ. ಇದರಿಂದ ಆರ್ಥಿಕತೆ ಸದೃಢವಾಗುತ್ತಾ?' ಎಂದು ಪ್ರಶ್ನಿಸಿದರು.
'ಗ್ರಾಮ ಪಂಚಾಯತಿ ಚುನಾವಣೆಗೆ ಸಿದ್ಧತೆಗಳನ್ನು ಮಾಡಬೇಕಿತ್ತು. ಆದರೆ, ಚುನಾವಣೆ ಮುಂದೂಡಿಕೆಗೆ ಪತ್ರ ನೀಡಿದ್ದಾರೆ. ಚುನಾವಣಾ ಆಯೋಗ ಸ್ವಾತಂತ್ರ್ಯವಾಗಿ ಕಾರ್ಯನಿರ್ವಹಿಸಬೇಕು. ಕೊರೊನಾದಿಂದ ಚುನಾವಣೆ ಮಾಡುವುದಿಲ್ಲ ಎನ್ನುವುದಾದ್ದಲ್ಲಿ, ಈಗಿರುವ ಗ್ರಾಮ ಪಂಚಾಯತಿ ಸದಸ್ಯರನ್ನೇ ಮುಂದಿನ ಆರು ತಿಂಗಳು ಮುಂದುವರಿಸಬೇಕು' ಎಂದು ಒತ್ತಾಯಿಸಿದರು.