ರಾಯಚೂರು, ಮೇ 20 (DaijiworldNews/PY) : ವಿದ್ಯುತ್ ಬೇಡಿಕೆ ಕುಸಿತವಾಗಿರುವ ಕಾರಣ ಆರ್ಟಿಪಿಎಸ್ 8ನೇ ಘಟಕದಲ್ಲಿ ಕೆಲಸಮಾಡುತ್ತಿದ್ದ 68 ಜನ ಕೆಲಸ ಕಳೆದುಕೊಂಡಿದ್ದಾರೆ.
ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ 8 ಘಟಕಗಳಲ್ಲಿ ಕೇವಲ ಎರಡು ಘಟಕಗಳಿಂದ ಮಾತ್ರ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಶಕ್ತಿನಗರದಲ್ಲಿರುವ ಆರ್ಟಿಪಿಎಸ್ ವಿದ್ಯುತ್ ಕೇಂದ್ರಕ್ಕೆ ಒಟ್ಟು 1,720 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವಿದ್ದು, ಈಗ ಎರಡು ಘಟಕಗಳಿಂದ ಕೇವಲ 282 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಸದ್ಯ ರಾಜ್ಯದಲ್ಲಿ 9,270 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇದ್ದು, ಜಲ ಹಾಗೂ ಪವನ ಶಕ್ತಿಯಿಂದ ಉತ್ಪಾದನೆ ಅಧಿಕವಾಗಿದೆ. ಈ ಕಾರಣದಿಂದ ಶಾಖೋತ್ಪನ್ನ ಸ್ಥಾವರದಿಂದ ವಿದ್ಯುತ್ ಉತ್ಪಾದನೆ ಕಡಿತಗೊಂಡಿದೆ.
ಗುತ್ತಿಗೆಯ ಕೆಲಸದ ಅವಧಿ ಮುಗಿದಿದ್ದು, ಈ ಸಂದರ್ಭದಲ್ಲಿ ವಿದ್ಯುತ್ ಬೇಡಿಕೆಯೂ ಕುಸಿತಗೊಂಡ ಕಾರಣ ಕೆಲಸದಿಂದ ಕಾರ್ಮಿಕರನ್ನು ಕೈಬಿಡಲಾಗಿದೆ. ಈ ಕಾರಣದಿಂದ ಕಾರ್ಮಿಕರು ಹೋರಾಟ ನಡೆಸಿದ್ದಾರೆ. ಲಾಕ್ಡೌನ್ ಸಂದರ್ಭ ಕೆಲಸದಿಂದ ವಜಾ ಮಾಡಿರುವ ಕಾರಣ ಕಾರ್ಮಿಕರು ಕೆಲಸ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಲಾಕ್ಡೌನ್ ಸಮಯದಲ್ಲಿ ಕೆಲಸದಿಂದ ವಜಾ ಮಾಡಬಾರದು, ವೇತನ ಕಡಿಮೆ ಮಾಡಬಾರದು ಎನ್ನುವ ನಿಯಮವಿದ್ದರೂ ಕಾರ್ಮಿಕರನ್ನು ವಜಾ ಮಾಡಿದ್ದಾರೆ.