ನವದೆಹಲಿ, ಮೇ 20 (Daijiworld News/MB) : ಕೊರೊನಾದಿಂದಾಗಿ ವಿಶ್ವವೇ ತತ್ತರಿಸಿರುವ ಈ ಸಂದರ್ಭದಲ್ಲಿ ಅಂಫಾನ್ ಚಂಡಮಾರುತದ ಭೀತಿಯೂ ಕೂಡಾ ಉಂಟಾಗಿದ್ದು ಈಗಾಗಲೇ ಒಡಿಶಾದ ಹಲವೆಡೆ ಭಾರೀ ಗಾಳಿ ಮಳೆ ಆರಂಭವಾಗಿದೆ.
ಬೆಳಿಗ್ಗೆ ಸುಮಾರು ನಾಲ್ಕು ಗಂಟೆಯಿಂದಲ್ಲೇ ಒಡಿಶಾದ ಭದ್ರಕ್, ಪಾರಾದೀಪ್, ಬಾಲಾಸೋರ್, ಚಂಡೀಪುರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆ ಆರಂಭವಾಗಿದ್ದು ಕರಾವಳಿ ಭಾಗಗಳಲ್ಲಿ 4-5 ಮೀಟರ್ ಎತ್ತರದ ಸಮುದ್ರದ ಅಲೆಗಳು ದಡಕ್ಕೆ ಬಡಿಯುತ್ತಿದೆ.ಇನ್ನು ಕೆಲವು ಪ್ರದೇಶಗಳಿಗೆ ಸಮುದ್ರದ ನೀರು ಅಪ್ಪಳಿಸಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.
ಈಗಾಗಲೇ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ 1 ಲಕ್ಷಕ್ಕೂ ಅಧಿಕ ಜನರ ಸ್ಥಳಾಂತರ ಮಾಡಲಾಗಿದ್ದು ಇನ್ನು ಕೂಡಾ ರಕ್ಷಣಾ ಕಾರ್ಯಚರಣೆ ನಡೆಸಲಾಗುತ್ತಿದೆ.
ಗಂಟೆಗೆ 195-200 ಕಿಲೋಮೀಟರ್ ವೇಗದ ಬದಲು ಅಂಫನ್ ಚಂಡಮಾರುತ 155-165 ಕಿಲೋಮೀಟರ್ ವೇಗದಲ್ಲಿ ಬಂಗಾಳ ಹಾಗೂ ಒಡಿಶಾದ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಗಳಿದ್ದು ಈಗಾಗಲೇ ಮುಂಜಾಗ್ರತಾ ಕ್ರಮವಾಗಿ 3 ಲಕ್ಷ ಜನರನ್ನು ಸೈಕ್ಲೋನ್ ಶೆಲ್ಟರ್ಗಳಿಗೆ ಸ್ಥಳಾಂತರ ಮಾಡಲಾಗಿದೆ ಎಂದು ಅಧಿಕಾತಿಗಳು ತಿಳಿಸಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧನಕರ್, ಕೊರೊನಾ ಸೋಂಕು ಹಾಗೂ ಈ ಅಂಫಾನ್ ಚಂಡಮಾರುತ ಎರಡೂ ಭೀಕರ ಸವಾಲು. ಜನರು ಸರ್ಕಾರದ ನಿರ್ದೇಶನ ಕಟ್ಟುನಿಟ್ಟಾಗಿ ಪಾಲಿಸಿ ನಾವು ನೋವನ್ನು ತಪ್ಪಿಸಬೇಕು ಎಂದು ಹೇಳಿದ್ದಾರೆ.
ಭಾರತೀಯ ಕರಾವಳಿ ಕಾವಲು ಪಡೆ 20 ರಕ್ಷಣಾ ತುಕಡಿಗಳನ್ನು ನಿಯೋಜಿಸಿದ್ದು, ಹೆಲಿಕಾಪ್ಟರ್ಗಳು, ಹಾಗೂ ಹಡಗುಗಳನ್ನು ರಕ್ಷಣಾ ಕಾರ್ಯಕ್ಕಾಗಿ ಸಜ್ಜಾಗಿ ನಿಂತಿವೆ. ಎಲ್ಲಾ ಕಡೆಗಳಿಂದ ಮಾಹಿತಿ ಸಂಗ್ರಹಿಸಲಾಗಿದ್ದು, ತೊಂದರೆಗೀಡಾಗಿರುವ ಪ್ರದೇಶಕ್ಕೆ ತಕ್ಷಣವೇ ಕಳುಹಿಸುವುದಾಗಿ ತಿಳಿಸಿವೆ.
ಇನ್ನು ಭೀಕರ ಚಂಡಮಾರುತ ಬಾಂಗ್ಲಾದೇಶದಲ್ಲಿ ಓರ್ವನನ್ನು ಬಲಿಪಡೆದುಕೊಂಡಿದೆ.