ಬೆಂಗಳೂರು,ಮೇ 20 (Daijiworld News/MSP): ಬೆಂಗಳೂರಿನ ವೈಟ್ ಫೀಲ್ಡ್, ಟಿನ್ ಫ್ಯಾಕ್ಟರಿ, ಕೋರಮಂಗಲ, ಜಯನಗರ, ಬಸವನಗುಡಿ, ಎಚ್.ಎಸ್.ಆರ್.ಲೇಔಟ್, ಕೆ.ಆರ್.ಪುರಂ, ಬನ್ನೇರುಘಟ್ಟ ರಸ್ತೆ ಮುಂತಾದ ಕಡೆ ಭೂಕಂಪದಂತೆ ಭಾರಿ ಶಬ್ದ ಕೇಳಿಬಂದಿದೆ. ಜನರು ಭಯಭೀತರಾಗಿದ್ದು ಇನ್ನೂ ಗೊಂದಲಗಳು ಬಗೆಹರಿದಿಲ್ಲ.
ಭೂಕಂಪನ ಒಂದು ಪ್ರದೇಶಕ್ಕೆ ಸೀಮಿತವಾಗಿರುವುದಿಲ್ಲ. ಪ್ರಮಾಣ ವ್ಯಾಪಕವಾಗಿರುತ್ತದೆ. ಬೆಂಗಳೂರಿನಲ್ಲಿ ಭೂಮಿ ಕಂಪಿಸಿರುವುದು ಭೂಕಂಪನ ಮಾಪಕಗಳಲ್ಲಿ ದಾಖಲಾಗಿಲ್ಲ ಹೀಗಾಗಿ ಭೂಕಂಪವಲ್ಲಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.
ನಿಗೂಢ ಶಬ್ದಕ್ಕೂ ಹೆಚ್ ಎ ಎಲ್ ಗೂ ಸಂಬಂಧವಿಲ್ಲ ಎಂದು ಹೆಚ್.ಎ.ಎಲ್ ಸ್ಪಷ್ಟಪಡಿಸಿದೆ. ಇನ್ನೊಂದೆಡೆ ಶಬ್ದಕ್ಕಿಂತ ಹೆಚ್ಚು ವೇಗವಾಗಿ ಚಲಿಸುವಂತಹ ಭಾರತೀಯ ವಾಯುಪಡೆಯ ರಷ್ಯಾ ನಿರ್ಮಿತ ಸೂಪರ್ ಸೋನಿಕ್ ಯುದ್ದವಿಮಾನದ ಶಬ್ದವಾಗಿದೆ ಎಂದು ಹೇಳಲಾಗಿದೆ.
ಗಾಳಿ ಸ್ಪೋಟದಿಂದಲೂ ಶಬ್ದ ಸಂಭವಿಸಿರಬಹುದು ಎಂದು ಹೇಳಲಾಗುತ್ತಿದೆ. ತಂಪು ಗಾಳಿ ಹಾಗೂ ಬಿಸಿಗಾಳಿಯ ಸ್ಪರ್ಶದಿಂದ ಗಾಳಿ ಸ್ಪೋಟ ಸಂಭವಿಸಿರಬಹುದು. ಚಂಡಮಾರುತ ಚಲನೆ ಆದಾಗ ಹವಾಮಾನ ಬದಲಾವಣೆಯಾಗುತ್ತದೆ. ಹವಾಮಾನ ಬದಲಾವಣೆ ವೇಳೆ ಬಿಸಿಗಾಳಿ ಚಲನೆಯಾಗುತ್ತದೆ. ಬಿಸಿಗಾಳಿ ಚಲನೆಯಾದಾಗ ಸ್ಫೋಟ ಶಬ್ಧ ಕೇಳಿಸುತ್ತದೆ. ಅಂಫಾನ್ ಚಂಡಮಾರುತದಿಂದ ಹವಾಮಾನ ಬದಲಾವಣೆಯಾಗಿರಬಹುದು. ಹೆಚ್ಚಿನ ಒತ್ತಡ, ಬಿಸಿ ಗಾಳಿಯ ಘರ್ಷಣೆಯಿಂದ ಶಬ್ಧ ಉಂಟಾಗುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ.
ಒಟ್ಟಾರೆ ಭಯಾನಕ ಶಬ್ದ ನಿಗೂಢವಾಗಿದ್ದು, ಶಬ್ದಕ್ಕೆ ನಿಖರ ಕಾರಣ ಏನೂ ಎಂದು ತಿಳಿದುಬಂದಿಲ್ಲ.