ಬೆಂಗಳೂರು, ಮೇ 20 (Daijiworld News/MSP): ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ದಿನಾಂಕ ನಿಗದಿಯಾದ ನಂತರ ವಿದ್ಯಾರ್ಥಿಗಳ ಮನಸ್ಥಿತಿ ಅರಿಯಲು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಬುಧವಾರವೂ ರಾಜ್ಯದ ವಿವಿಧೆಡೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡವುದನ್ನು ಮುಂದುವರೆಸಿ ಪರೀಕ್ಷೆಗೆ ಸಜ್ಜಾಗಿರುವ ಕುರಿತಂತೆ ವಿಚಾರಿಸಿದರು.
ತಮ್ಮ ಕಚೇರಿಯಿಂದ ಬೆಳಗ್ಗೆಯಿಂದಲೇ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ರಾಮಗನರ ಶೈಕ್ಷಣಿಕ ಜಿಲ್ಲೆಗಳ 50ಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ಮಾತನಾಡಿ, ಪರೀಕ್ಷೆಗೆ ಹೇಗೆ ತಯಾರಿ ನಡೆಸಿದ್ದೀರಿ ಎಂದು ಪ್ರಶ್ನಿಸಿ, ಕೊರೋನಾ ಹಿನ್ನೆಲೆಯಲ್ಲಿ ಪರೀಕ್ಷೆ ಈ ಬಾರಿ ಸ್ವಲ್ಪ ತಡವಾಗಿ ಆರಂಭವಾಗುತ್ತಿರುವುದಕ್ಕೆ ಬೇಜಾರು ಮಾಡಿಕೊಳ್ಳದೇ ಚೆನ್ನಾಗಿ ಓದಬೇಕು ಎಂದು ಸಲಹೆ ನೀಡಿದರು.
ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡುವುದು ಸೇರಿದಂತೆ ದೂರದರ್ಶನ ಚಂದನ ವಾಹಿನಿಯಲ್ಲಿ ಪುನರ್ಮನನ ತರಗತಿಗಳನ್ನು ನೋಡುತ್ತಿದ್ದೀರಾ ಎಂದು ಪ್ರಶ್ನಿಸಿದರು.
ಚಂದನ ವಾಹಿನಿಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಪುನರ್ಮನನ ತರಗತಿಗಳು ನಡೆಯುತ್ತಿದ್ದು, ಪ್ರತಿಯೊಬ್ಬರೂ ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.ಹಲವಾರು ವಿದ್ಯಾರ್ಥಿಗಳು ಈ ಸಮಯದಲ್ಲಿ ದೂರದರ್ಶನದಲ್ಲಿ ಬರುತ್ತಿರುವ ಪುನರ್ಮನನ ತರಗತಿಗಳಿಂದ ಹೆಚ್ಚಿನ ಉಪಯೋಗವಾಗುತ್ತಿದೆ ಎಂದು ತಿಳಿಸಿದಾಗ, ಕೊನೆಯ ಮೂರು ದಿನಗಳಲ್ಲಿ ಮೂರು ಸೆಟ್ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಉತ್ತರಿಸುವ ಪ್ರಯೋಗ ನಡೆಯಲಿದ್ದು, ಅದರ ಸದುಪಯೋಗಪಡಿಸಿಕೊಳ್ಳಬೇಕೆಂದು ಮಾರ್ಗದರ್ಶನ ನೀಡಿದರು.
ಕೆಂಗೇರಿ ಭಾಗದ ಗ್ರಾಮಾಂತರ ಪ್ರದೇಶದ ಮಂಜುಕುಮಾರಿ ಎಂಬ ವಿದ್ಯಾರ್ಥಿನಿಯೊಬ್ಬಳು ತಮ್ಮ ಮನೆಯಲ್ಲಿ ಟಿ.ವಿ.ಗೆ ಕರೆನ್ಸಿ ಹಾಕಿಸಿಲ್ಲವಾದ್ದರಿಂದ ತಾನು ಪುನರ್ಮನನ ತರಗತಿ ವೀಕ್ಷಿಸಲು ಸಾಧ್ಯವಾಗಿಲ್ಲ ಎಂದು ಹೇಳಿದ ಆ ಭಾಗದ ಶಿಕ್ಷಣ ಇಲಾಖೆ ಅಧಿಕಾರಿಗೆ ಫೋನಾಯಿಸಿದ ಸಚಿವರು, ವಿದ್ಯಾರ್ಥಿನಿಯ ಫೋನ್ ನಂಬರ್ ನೀಡಿದ್ದಲ್ಲದೇ ಆ ವಿದ್ಯಾರ್ಥಿನಿಗೆ ಚಂದನ ವಾಹಿನಿಯ ಪುನರ್ಮನನ ತರಗತಿ ವೀಕ್ಷಿಸಲು ಟಿ.ವಿ. ವ್ಯವಸ್ಥೆ ಮಾಡಿಕೊಡಲು ಸೂಚಿಸಿದರು.
ಸಚಿವರೊಂದಿಗೆ ಮಾತನಾಡಿದ ಎಲ್ಲ ವಿದ್ಯಾರ್ಥಿಗಳು ಕೊನೆಗೂ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿದ್ದರಿಂದ ಖುಷಿಯಾಗಿದ್ದು, ನಿನ್ನೆಯಿಂದಲೇ ಪರೀಕ್ಷೆಗೆ ಗಂಭೀರವಾಗಿ ಓದುತ್ತಿರುವುದಾಗಿ ಹೇಳಿಕೊಂಡರು. ಪರೀಕ್ಷೆ ಕೊಠಡಿಗೆ ಸಂತೋಷದಿಂದ ತೆರಳಿ, ಮೊದಲು ಪ್ರಶ್ನೆ ಪತ್ರಿಕೆ ಓದಿಕೊಂಡು ನಂತರ ತಮಗೆ ಸುಲಭವೆನಿಸಿದ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ ನಂತರ ಉಳಿದ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಬೇಕು ಎಂದು ತಿಳಿಸಿದ ಸುರೇಶ್ಕುಮಾರ್, ಪರೀಕ್ಷೆ ಎಂದರೆ ಆಟವಿದ್ದಂತೆ ಎಂದು ಭಾವಿಸಿ ಸಂತೋಷದಿಂದ ಪರೀಕ್ಷಾ ಕೊಠಡಿಗೆ ತೆರಳುವಂತೆ ಸಚಿವರು ತಿಳಿಸಿದರು.
ಹಾಗೆಯೇ ಕೊರೋನ ಹಿನ್ನೆಲೆಯಲ್ಲಿ ಪರೀಕ್ಷೆಗೆ ಕೈಗೊಂಡ ಸಿದ್ಧತೆಗಳನ್ನು ವಿವರಿಸಿ, ಆರೋಗ್ಯದ ಕಡೆ ಗಮನ ಹರಿಸಲು ಮತ್ತು ಸಾಮಾಜಿಕ ಅಂತರ ಪಾಲಿಸಬೇಕೆಂದು ಹೇಳಿದರು.ಬೆಂಗಳೂರಿನ ಸಾರಕ್ಕಿ ಭಾಗದ ಪ್ರದೀಪ್ ಎಂಬ ವಿದ್ಯಾರ್ಥಿ ಅಂಗಡಿಯಲ್ಲಿ ಕೆಲಸ ಮಾಡುತ್ತಲೇ ಓದಿಕೊಳ್ಳುತ್ತಿರುವುದಾಗಿ ತಿಳಿಸಿದ. ತನ್ನ ತಾಯಿ ಮನೆಗೆಲಸ ಮಾಡಿ ಜೀವನ ಮಾಡುತ್ತಿರುವುದರಿಂದ ತಾನು ತನ್ನ ವಿದ್ಯಾಭ್ಯಾಸದ ಖರ್ಚಿಗಾಗಿ ತಾನು ಓದಿಕೊಳ್ಳುತ್ತಲೇ ಪ್ರತಿದಿನ 200 ರೂ. ಸಂಪಾದಿಸುತ್ತಿರುವುದಾಗಿ ತಿಳಿಸಿದ. ಮುಂದೆ ನಿನಗೆ ಬೇರೆ ರೀತಿಯಲ್ಲಿ ಸಹಾಯ ಮಾಡಿದರಾಯಿತು, ಪರೀಕ್ಷೆ ಮುಗಿಯುವ ತನಕ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನಹರಿಸಬೇಕೆಂದು ಸಲಹೆ ನೀಡಿದರು.ಹಾಗೆಯೇ ನಿಮ್ಮ ಸ್ನೇಹಿತರಾರಾದರೂ ತಮ್ಮ ಶಾಲೆಯಿಂದ ದೂರದ ಊರಿನಲ್ಲಿದ್ದರೆ, ಅವರಿಗೆ ಹತ್ತಿರದ ಪರೀಕ್ಷಾ ಕೇಂದ್ರಕ್ಕೆ ಬದಲಾಯಿಸಿಕೊಂಡು ಅವರು ಇರುವ ಊರಿನ ಸಮೀಪದಲ್ಲೇ ಪರೀಕ್ಷೆ ಬರೆಯಲು ಅವಕಾಶ ಇರುವ ಕುರಿತು ತಿಳಿಸಬೇಕೆಂದೂ ಸುರೇಶ್ ಕುಮಾರ್ ಸಲಹೆ ನೀಡಿದರು.