ಬೆಂಗಳೂರು, ಮೇ 20 (DaijiworldNews/PY) : ಬೆಂಗಳೂರಿನ ವೈಟ್ ಫೀಲ್ಡ್, ಟಿನ್ ಫ್ಯಾಕ್ಟರಿ, ಕೋರಮಂಗಲ, ಜಯನಗರ, ಬಸವನಗುಡಿ, ಎಚ್.ಎಸ್.ಆರ್.ಲೇಔಟ್, ಕೆ.ಆರ್.ಪುರಂ, ಬನ್ನೇರುಘಟ್ಟ ರಸ್ತೆ ಮುಂತಾದ ಕಡೆ ಭೂಕಂಪದಂತೆ ಭಾರಿ ಶಬ್ದ ಕೇಳಿಬಂದಿದ್ದು, ನಿಗೂಢವಾದ ಈ ಶಬ್ಧಕ್ಕೆ ಎಚ್ಎಎಲ್ ತೆರೆ ಎಳೆದಿದೆ.
ಮಧ್ಯಾಹ್ನ ಸುಮಾರು 1.45ರ ಸುಮಾರಿಗೆ ಭೂಕಂಪದಂತೆ ಭಾರೀ ಶಬ್ದವಾಗಿದ್ದು, ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ಈ ಶಬ್ದ ಕೇಳಿಬಂದಿದ್ದು, ಈ ಶಬ್ದ ಜನರನ್ನು ಬೆಚ್ಚುಬೀಳುವಂತೆ ಮಾಡಿತ್ತು. ಈ ಶಬ್ಧ ಬೂಕಂಪವಾಗಿರಬಹುದೆಂಬ ಚರ್ಚೆಗೂ ಗ್ರಾಸವಾಗಿತ್ತು. ಅಷ್ಟರಲ್ಲೇ ಕೆಎಸ್ಎನ್ಡಿಎಮ್ಸಿ ಅಧಿಕಾರಿಗಳು ಈ ಶಬ್ಧ ಭೂಕಂಪದಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಆದರೂ, ಜನರಿಗೆ ಶಬ್ದ ಎಲ್ಲಿಂದ ಬಂತು ಎಂಬ ಪ್ರಶ್ನೆ ಮಾತ್ರ ಹಾಗೇ ಉಳಿದಿತ್ತು. ಈ ಪ್ರಶ್ನೆಗೆ ಸದ್ಯ ಎಚ್ಎಎಲ್ ಸ್ಪಷ್ಟ ಮಾಹಿತಿ ನೀಡಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಚ್ಎಎಲ್, ಸುಖೋಯ್ 30 ಯುದ್ಧ ವಿಮಾನನಿಂದಲೇ ಈ ಶಬ್ದ ಕೇಳಿ ಬಂದಿತ್ತು. ಸುಖೋಯ್ 30 ಎಚ್ಎಎಲ್ ರನ್ವೇನಲ್ಲಿ 90 ಡಿಗ್ರಿ ಟೇಕ್ ಆಫ್ ಮಾಡಿದ ಸಂದರ್ಭ ಶಬ್ದ ಉಂಟಾಗಿದೆ. ಸುಖೋಯ್ 30 90 ಡಿಗ್ರಿ ಟೇಕಾಫ್ ಮಾಡಿದಾಗ 10 ಕಿಮೀ ವರೆಗೂ ಶಬ್ದ ಕೇಳಿಸುತ್ತದೆ ಎಂದು ತಿಳಿಸಿದೆ.