ನವದೆಹಲಿ, ಮೇ 21 (Daijiworld News/MB) : ಕೊರೊನಾ ಮಾಹಾಮಾರಿಯ ಆತಂಕದ ನಡುವೆ ಇದೀಗ ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಅಂಫಾನ್ ಚಂಡಮಾರುತದ ಭೀತಿ ಉಂಟಾಗಿದ್ದು ಸುಮಾರು 190 ಕಿ.ಮೀ ವೇಗದಲ್ಲಿ ಬೀಸುತ್ತಿರುವ ಈ ಚಂಡಮಾರುತಕ್ಕೆ ಕನಿಷ್ಠ 10 ಮಂದಿ ಬಲಿಯಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 13 ಬಾಲಕಿ ಸೇರಿದಂತೆ 10-12 ಮಂದಿ, ಒಡಿಶಾದಲ್ಲಿ ಮೂವರು ಅಂಫಾನ್ಗೆ ಬಲಿಯಾಗಿದ್ದಾರೆ.
ಇನ್ನು ಈ ಚಂಡಮಾರುತದ ಅಬ್ಬರದಿಂದಾಗಿ ಭಾರೀ ಪ್ರಮಾಣದಲ್ಲಿ ಆಸ್ತಿಪಾಸ್ತಿಗಳು ನಾಶವಾಗಿದ್ದು ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತಾದಲ್ಲಿ ಅನೇಕ ಕಟ್ಟಡಗಳು ಕುಸಿದು ಬಿದ್ದಿದೆ. ಇನ್ನೂ 1-2 ದಿನ ಬೀಸಿ ಚಂಡಮಾರುತ ಕಡಿಮೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಏತನ್ಮಧ್ಯೆ ರಕ್ಷಣಾ ಕಾರ್ಯಗಳಿಗೆಂದು ರಾಷ್ಟ್ರೀಯ ವಿಪತ್ತು ಪರಿಹಾರ ಪಡೆಯು (ಎನ್ಡಿಆರ್ಎಫ್), 20 ತಂಡಗಳನ್ನು ಒಡಿಶಾಕ್ಕೆ 19 ತಂಡಗಳನ್ನು ಪಶ್ಚಿಮ ಬಂಗಾಳಕ್ಕೆ ರವಾನೆ ಮಾಡಲಾಗಿದ್ದು ಈ ತಂಡ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತವಾಗಿವೆ.
ಪಶ್ಚಿಮ ಬಂಗಾಳದಲ್ಲಿ 6.5 ಲಕ್ಷಕ್ಕೂ ಹೆಚ್ಚು ಜನರು ಹಾಗೂ ಒಡಿಶಾದಲ್ಲಿ 1.58 ಲಕ್ಷ ಜನ ಸೇರಿದಂತೆ ಒಟ್ಟು 8ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.